Monday, 25th November 2024

Minimum Wage : ಕೇಂದ್ರದಿಂದ ದಸರಾ ಬೋನಸ್, ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಸರ್ಕಾರ

Minimum Wage

ನವದೆಹಲಿ: ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕ ವಲಯಕ್ಕೆ ದಸರಾ ಬೋನಸ್‌ ಕೊಟ್ಟಿದೆ. ಹೆಚ್ಚುತ್ತಿರುವ ಜೀವನ ವೆಚ್ಚ ನಿಭಾಯಿಸಲು ಕಾರ್ಮಿಕರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ವ್ಯತ್ಯಾಸವಾಗುವ ತುಟ್ಟಿಭತ್ಯೆ (ವಿಡಿಎ) ಪರಿಷ್ಕರಿಸಿದ್ದು ಕನಿಷ್ಠ ವೇತನ (Minimum Wage) ಹೆಚ್ಚಿಸುವುದಾಗಿ ಸರ್ಕಾರ ಗುರುವಾರ ಪ್ರಕಟಿಸಿದೆ.

ಸರ್ಕಾರದ ಈ ಕ್ರಮವು ಕಾರ್ಮಿಕರು ಮತ್ತು ವಿಶೇಷವಾಗಿ ಅಸಂಘಟಿತ ವಲಯಕ್ಕೆ ಲಾಭವಾಗಲಿದೆ. ಕಟ್ಟಡ ನಿರ್ಮಾಣ, ಲೋಡಿಂಗ್ ಮತ್ತು ಅನ್‌ಲೋಡಿಂಗ್‌ , ಕಾವಲು ಮತ್ತು ವಾರ್ಡ್, ಕಸ ಗುಡಿಸುವುದು, ಸ್ವಚ್ಛಗೊಳಿಸುವುದು, ಹೌಸ್ ಕೀಪಿಂಗ್, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಕಾರ್ಮಿಕರು ಪರಿಷ್ಕೃತ ವೇತನ ದರಗಳಿಂದ ಪ್ರಯೋಜನ ಪಡೆಯಲಿದ್ದಾರೆ.

ಹೊಸ ವೇತನ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಕೊನೆಯ ಪರಿಷ್ಕರಣೆಯನ್ನು ಈ ವರ್ಷದ ಏಪ್ರಿಲ್ ನಲ್ಲಿ ಮಾಡಲಾಗಿತ್ತು. ಕನಿಷ್ಠ ವೇತನ ದರಗಳನ್ನು ಕೌಶಲ ಮಟ್ಟಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ – ಕೌಶಲರಹಿತ, ಅರೆ-ನುರಿತ, ನುರಿತ ಮತ್ತು ಹೆಚ್ಚು ಕೌಶಲವುಳ್ಳ ಕಾರ್ಮಿಕರು ಎಂದು ವರ್ಗೀಕರಿಸಲಾಗಿದೆ. ಜತೆಗೆ ಭೌಗೋಳಿಕವಾಗಿ ಎ, ಬಿ ಮತ್ತು ಸಿ ಎಂದು ವಿಂಗಡನೆ ಮಾಡಲಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಪರಿಷ್ಕರಣೆಯ ನಂತರ, ನಿರ್ಮಾಣ, ಗುಡಿಸುವಿಕೆ, ಶುಚಿಗೊಳಿಸುವಿಕೆ, ಕೌಶಲ್ಯರಹಿತ ಕೆಲಸಕ್ಕಾಗಿ ಲೋಡ್ ಮತ್ತು ಅನ್ಲೋಡಿಂಗ್ ಮಾಡುವ ಕಾರ್ಮಿಕರಿಗೆ “ಎ” ಪ್ರದೇಶದಲ್ಲಿ ಕನಿಷ್ಠ ವೇತನ ದರಗಳು ದಿನಕ್ಕೆ 783 ರೂ (ತಿಂಗಳಿಗೆ 20,358 ರೂಪಾಯಿ) ಆಗಿರುತ್ತದೆ. ಅರೆ ಕೌಶಲ ಕಾರ್ಮಿಕರಿಗೆ ದಿನಕ್ಕೆ ₹ 868 (ತಿಂಗಳಿಗೆ 22,568 ರೂಪಾಯಿ) ನುರಿತ, ಕ್ಲರಿಕಲ್ ಮತ್ತು ವಾಚ್ ಮತ್ತು ಶಸ್ತ್ರಾಸ್ತ್ರಗಳಿಲ್ಲದ ವಾರ್ಡ್‌ಗಳಿಗೆ ದಿನಕ್ಕೆ 954 ರೂ (ತಿಂಗಳಿಗೆ 24,804 ರೂಪಾಯಿ) ಮತ್ತು ಹೆಚ್ಚು ನುರಿತ ಮತ್ತು ಕಾವಲು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಾರ್ಡ್‌ಗೆ ದಿನಕ್ಕೆ ₹ 1,035 (ತಿಂಗಳಿಗೆ 26,910 ರೂಪಾಯಿ) ವೇತನ ದೊರೆಯಲಿದೆ.

ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಆರು ತಿಂಗಳ ಸರಾಸರಿ ಹೆಚ್ಚಳದ ಆಧಾರದ ಮೇಲೆ ಸರ್ಕಾರವು ವರ್ಷಕ್ಕೆ ಎರಡು ಬಾರಿ ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪರಿಷ್ಕರಿಸುತ್ತದೆ. ಇದು ಏಪ್ರಿಲ್ 1 ಮತ್ತು ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ.

ಇದನ್ನೂ ಓದಿ: Param Rudra Supercomputer : ‘ಪರಮ ರುದ್ರ’ ಸೂಪರ್ ಕಂಪ್ಯೂಟರ್‌ ವ್ಯವಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ

ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಲ್ಲಿ ಶೇಕಡಾ 2.15 ಕ್ಕೆ ಇಳಿದಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಶೇಕಡಾ 7.54 ರಷ್ಟಿತ್ತು. ಜೂನ್ 2024 ರಲ್ಲಿ ವಾರ್ಷಿಕ ಹಣದುಬ್ಬರವು ಶೇಕಡಾ 3.67 ರಷ್ಟಿದ್ದು, ಜೂನ್ 2023 ರಲ್ಲಿ ಶೇಕಡಾ 5.57 ರಷ್ಟಿತ್ತು. ಗ್ರಾಹಕ ಬೆಲೆ ಸೂಚ್ಯಂಕ-ಕೈಗಾರಿಕಾ ಕಾರ್ಮಿಕರ (ಸಿಪಿಐ-ಐಡಬ್ಲ್ಯೂ) ಈ ವರ್ಷದ ಫೆಬ್ರವರಿಯಿಂದ ಸ್ಥಿರವಾಗಿ ಕುಸಿಯುತ್ತಿದೆ ಮತ್ತು ಏಪ್ರಿಲ್ 2024 ರಲ್ಲಿ ಶೇಕಡಾ 3.87 ರಷ್ಟಿತ್ತು ಎಂದು ಕಾರ್ಮಿಕ ಸಚಿವಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.

ಜುಲೈ 2024 ರಲ್ಲಿ ಅಖಿಲ ಭಾರತ ಸಿಪಿಐ-ಐಡಬ್ಲ್ಯೂ 1.3 ಪಾಯಿಂಟ್‌ಗಳಷ್ಟು ಏರಿಕೆಯಾಗಿ 142.7 ಕ್ಕೆ ತಲುಪಿದೆ, ಇದು ಜೂನ್ನಲ್ಲಿ 141.4 ರಷ್ಟಿತ್ತು.