Monday, 16th September 2024

ಡಿ.26ರದವರೆಗೆ ಚಂದಾ ಕೊಚ್ಚರ್, ದೀಪಕ್ ಕೊಚ್ಚರ್ ಸಿಬಿಐ ವಶಕ್ಕೆ

ಮುಂಬೈ: ವಿಡಿಯೊಕಾನ್‌ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಎಸಗಿರುವ ಸಂಬಂಧ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಡಿ.26ರದವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿದ್ದರು. ಪ್ರತಿಕ್ರಿಯೆ ನೀಡದೇ ನುಣುಚಿ ಕೊಳ್ಳುತ್ತಿರುವುದರ ಜೊತೆಗೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳು ಆರೋಪ ಮಾಡಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಚಂದಾ ಕೊಚ್ಚರ್, ದೀಪಕ್ ಕೊಚ್ಚರ್ ಮತ್ತು ವೀಡಿಯೊಕಾನ್‌ ಸಮೂಹದ ವೇಣುಗೋಪಾಲ್ ಧೂತ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡಿತ್ತು. ಕಂಪನಿಗಳಾದ ನ್ಯೂಪವರ್ ರಿನ್ಯೂವಬಲ್ಸ್‌, ಸುಪ್ರೀಂ ಎನರ್ಜಿ, ವಿಡಿಯೊಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ ಮತ್ತು ವಿಡಿಯೊ ಕಾನ್ ಇಂಡಸ್ಟ್ರೀಸ್‌ ಲಿಮಿಟೆಡ್‌ ವಿರುದ್ಧವೂ ಸಿಬಿಐ 2019ರಲ್ಲಿ ಎಫ್‌ಐಆರ್ ದಾಖಲು ಮಾಡಿತ್ತು.

ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ, ಆರ್‌ಬಿಐ ಮಾರ್ಗಸೂಚಿಗಳು ಹಾಗೂ ಬ್ಯಾಂಕ್‌ನ ಸಾಲ ನೀತಿಗಳ ಉಲ್ಲಂಘನೆ ಮಾಡಿ, ವಿಡಿಯೊಕಾನ್‌ ಸಮೂಹಕ್ಕೆ ₹3,250 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಐಸಿಐಸಿಐ ಬ್ಯಾಂಕ್‌ ವಿರುದ್ಧ ಸಿಬಿಐ ಆರೋಪ ಮಾಡಿದೆ.

2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ₹ 3,250 ಕೋಟಿ ಸಾಲ ಪಡೆದ ಕೆಲವೇ ತಿಂಗಳಲ್ಲಿ ಧೂತ್ ಅವರು ನ್ಯೂಪವರ್ ಕಂಪನಿಯಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 
Read E-Paper click here