Thursday, 12th December 2024

ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನಿ ಅಧಿಕಾರ ಸ್ವೀಕಾರ

ಚಂಡೀಘಡ: ಚರಣ್ ಜಿತ್ ಸಿಂಗ್ ಛನಿ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ನೂತನ ಮುಖ್ಯಮಂತ್ರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಕಾಂಗ್ರೆಸ್ ಮುಖಂಡರಾದ ಸುಖಜಿಂದರ್ ರಾಂಧವ ಹಾಗೂ ಒಪಿ ಸೋನಿ ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಉಪಸ್ಥಿತ ರಿದ್ದರು. ನಿರ್ಗಮಿತ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಮಾರಂಭದಲ್ಲಿ ಗೈರಾಗಿದ್ದರು.

ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಚರಣ್ ಜಿತ್ ಸಿಂಗ್ ಛನಿ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.

ರೂಪ್ ನಗರದ ಚಂಕೌರ್ ಸಾಹೀಬ್ ಕ್ಷೇತ್ರದ ಮೂರು ಬಾರಿ ಶಾಸಕರಾಗಿರುವ ಛನಿ, ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿಯಾಗಿದ್ದಾರೆ. ಕ್ಯಾ.ಅಮರೀಂದರ್ ಸಿಂಗ್ ಅವರ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.