Thursday, 12th December 2024

ನರ್ಸಿಂಗ್ ವಿದ್ಯಾರ್ಥಿಗಳ ಪರೀಕ್ಷೆಯ ಸಾಮೂಹಿಕ ನಕಲು ವೈರಲ್‌

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಕೋರ್ಸ್ ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭ  ಸಾಮೂಹಿಕ ನಕಲು ಮಾಡು ತ್ತಿರುವ ವೀಡಿಯೊಗಳು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಇದೀಗ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಮೊರೆನಾದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಗೆ ಕೆಲವು ಖಾಸಗಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗಿದ್ದರು.

ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ರಾಕೇಶ್ ಶರ್ಮಾ ಅವರು, ಪರೀಕ್ಷೆಗಳನ್ನು ನಡೆಸಲು ಮತ್ತು ಆಪಾದಿತ ಸಾಮೂಹಿಕ ನಕಲುನಡೆಸಿರುವ ಕುರಿತು ತನಿಖೆ ನಡೆಸಲು ಐದು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಸಮಿತಿಯು 15 ದಿನದೊಳಗೆ ವರದಿ ಸಲ್ಲಿಸಲಿದ್ದು, ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್‌ಗೂ ನೋಟಿಸ್‌ ನೀಡಲಾಗುತ್ತಿದೆ ಎಂದು ತಿಳಿಸಿದರು. ವರದಿ ಸಲ್ಲಿಸಿದ ನಂತರ ಸಂಬಂಧಪಟ್ಟ ಕಾಲೇಜುಗಳ ನೋಂದಣಿ ರದ್ದುಪಡಿಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.