ಗುವಾಹಟಿ: ಅಸ್ಸಾಂ ಸರ್ಕಾರವು 15 ದಿನಗಳಿಂದ ಬಾಲ್ಯವಿವಾಹದ ವಿರುದ್ಧ ಕೈಗೊಳ್ಳಲಾದ ಕಠಿಣ ಕ್ರಮಗಳು ಸಕಾರಾತ್ಮಕ ಪರಿಣಾಮ ಬೀರಿದ್ದು, ಹಲವಾರು ಕುಟುಂಬಗಳು ಈಗಾಗಲೇ ನಿಗದಿ ಮಾಡಿದ್ದ ಬಾಲ್ಯ ವಿವಾಹಗಳನ್ನು ರದ್ದುಗೊಳಿಸಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶುಕ್ರವಾರ ಹೇಳಿದ್ದಾರೆ.
ಅಸ್ಸಾಂ ಸರ್ಕಾರವು ಬಾಲ್ಯ ವಿವಾಹದ ವಿರುದ್ಧ ಫೆ.3ರಿಂದ ಕಾರ್ಯಾಚರಣೆ ಪ್ರಾರಂಭಿಸಿತ್ತು. ಈ ಕುರಿತು ಮಂಗಳವಾರದವೆರೆಗೆ 4,225 ಪ್ರಕರಣಗಳನ್ನು ದಾಖಲಿಸಿ 3,031 ಮಂದಿಯನ್ನು ಬಂಧಿಸಲಾಗಿದೆ.
ಟ್ವೀಟ್ ಮಾಡಿರುವ ಶರ್ಮಾ, ‘ಈಗಾಗಲೇ ನಿಗದಿ ಮಾಡಲಾಗಿದ್ದ ಬಾಲ್ಯ ವಿವಾಹಗಳನ್ನು ಹಲವರು ರದ್ದುಪಡಿಸಿರುವುದಾಗಿ ಅಸ್ಸಾಂನ ವಿವಿಧೆಡೆಗಳಿಂದ ವರದಿಗಳು ಬಂದಿವೆ. ಇದು ನಿಜವಾಗಿಯೂ 15 ದಿನಗಳ ನಮ್ಮ ಪ್ರಯತ್ನಕ್ಕೆ ಸಂದ ಸಕಾರಾತ್ಮಕ ಫಲ’ ಎಂದು ಹೇಳಿದ್ದಾರೆ.