ಲಖನೌ: ಚೀನಾದೊಂದಿಗೆ ಲಿಂಕ್ ಇರಿಸಿಕೊಂಡಿದ್ದ 3,000 ಕೋಟಿ ರೂಪಾಯಿ ಮೌಲ್ಯದ ಆನ್‌ಲೈನ್ ವಂಚನೆ ಜಾಲವನ್ನು ಉತ್ತರ ಪ್ರದೇಶ ಪೊಲೀಸರ ಸೈಬರ್ ಸೆಲ್ ವಿಭಾಗವು ಭೇದಿಸಿದೆ ಎಂದು ವರದಿಯಾಗಿದೆ.
ಪ್ರಮುಖ ಸಂಸ್ಥೆಗಳಲ್ಲಿ ಅರೆಕಾಲಿಕ ಕೆಲಸ ಕೊಡಿಸುವ ಆಮಿಷವೊಡ್ಡಿ ಹಾಗೂ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿ ಸುವ ನೆಪದಲ್ಲಿ ಜಾಲ ಜನರನ್ನು ವಂಚಿಸುತ್ತಿತ್ತು ಎಂದು ಸೆಲ್ ನ ಪೊಲೀಸ್ ಅಧೀಕ್ಷಕ ತ್ರಿವೇಣಿ ಸಿಂಗ್ ಹೇಳಿದ್ದಾರೆ.
ಪ್ರಮುಖ ಆರೋಪಿಯನ್ನು ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ನೋಯ್ಡಾದಲ್ಲಿ ಸೆರೆಹಿಡಿದಿದ್ದಾರೆ. ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ 35 ವರ್ಷದ ಮಂಜರುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಹಗರಣದಲ್ಲಿ ಬಲಿಪಶುವಾದವರ ಖಾತೆಯಿಂದ ವಂಚಿಸಿದ ಹಣವನ್ನು ಯುಪಿಐ ಐಡಿಗಳ ಮೂಲಕ ಚೀನಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂನಲ್ಲಿ ನಿರ್ವಹಣೆಯಾಗು ತ್ತಿದ್ದ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್‌ಗಳಿಗೆ ವರ್ಗಾಯಿಸ ಲಾಗುತ್ತಿತ್ತು.
ಅರೆಕಾಲಿಕ ಉದ್ಯೋಗಕ್ಕಾಗಿ ಆಕರ್ಷಕ ಜಾಹೀರಾತುಗಳು, ಹೂಡಿಕೆ ಹಣವನ್ನು ದ್ವಿಗುಣಗೊಳಿಸುವುದಾಗಿ ಈ ಗ್ಯಾಂಗ್ ಜನರಿಗೆ ಸಂದೇಶಗಳನ್ನು ಕಳುಹಿಸುತ್ತಿತ್ತು. ಈ ಸಂದೇಶಗಳನ್ನು ನಂಬಿ ವ್ಯವಹರಿಸುತ್ತಿದ್ದ ಜನರು ಈ ಜಾಲದ ಬಲೆಯಲ್ಲಿ ಸಿಲುಕಿಕೊಳ್ಳು ತ್ತಿದ್ದರು.