Thursday, 12th December 2024

Chinmayi Sripada: ‘ನನ್ನ ಹುಟ್ಟಿನ ಬಗ್ಗೆ ಚಿಂತಿಸಬೇಡಿʼ- ತನ್ನ ವಿರುದ್ಧ ಅವಹೇಳನಕಾರಿ ಕಾಮೆಂಟ್‌ ಮಾಡಿದವರಿಗೆ ಗಾಯಕಿ ತಿರುಗೇಟು

ಚೆನ್ನೈ: ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ(Chinmayi Sripada) ಅವರು ಮುಂಚೆಯಿಂದಲೂ ಸಾಕಷ್ಟು ವಿವಾದಕ್ಕೆ ಈಡಾಗುತ್ತಿದ್ದಾರೆ. ಮೊನ್ನೆಯಷ್ಟೇ ಅವರ ಪೋಸ್ಟ್‌ವೊಂದಕ್ಕೆ ಎಕ್ಸ್‌ ಬಳಕೆದಾರರು(X User) ಮಾಡಿದ ಅವಹೇಳನಕಾರಿ ಕಾಮೆಂಟ್‌ಗೆ(Comment) ಈಗ ಚಿನ್ಮಯಿ ಕಿಡಿಕಾರಿದ್ದು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿಸೆಂಬರ್‌ 11ರಂದು ಪತ್ನಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್‌(Atul Subhash) ಸುಭಾಷ್‌ ಸಾವಿನ ಕುರಿತು ಚಿನ್ಮಯಿ ಶ್ರೀಪಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅತುಲ್‌ ಸಾವಿಗೆ ನ್ಯಾಯ ಸಿಗಬೇಕೆಂಬ ಸಾಕಷ್ಟು ಬೇಡಿಕೆಗಳ ಮಧ್ಯೆಯೇ, “ಬೆಂಬಲ ನೀಡಲು, ಫಂಡ್‌ ಸಂಗ್ರಹಿಸಲು ಮತ್ತು ಆಕ್ಸೆಂಚರ್‌ನಂತಹ ಕಂಪನಿಗಳಿಗೆ ಒತ್ತಡ ಹೇರಲು ಪುರುಷರು ಸಮರ್ಥರಾಗಿದ್ದಾರೆ. ಅಷ್ಟೇ ಅಲ್ಲದೆ, ಅತುಲ್‌ ಪತ್ನಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ವಿಫಲರಾಗಿದ್ದಾರೆ” ಎಂಬಂಥ ಚಿನ್ಮಯಿ ಶ್ರೀಪಾದಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ಕೆರಳಿಸಿತು. ಚಿನ್ಮಯಿ ತಮ್ಮ ಪೋಸ್ಟ್‌ನಿಂದ ಸಾಕಷ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವೇ ಗಂಟೆಗಳಲ್ಲಿ ಅವರ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಬಂದವು. ಕೆಲವರು ತೀರಾ ಅಸಭ್ಯವಾಗಿ ಕಾಮೆಂಟ್‌ ಹಾಕಿದ್ದಾರೆ. “ಚಿನ್ಮಯಿ ನೀವು ವೇಶ್ಯೆಯೇ? ನಿಮ್ಮ ಹುಟ್ಟಿನ ಬಗ್ಗೆ ಅನುಮಾನವಿದೆ. ನಿಮಗೆ ಒಂದಕ್ಕಿಂತ ಹೆಚ್ಚು ತಂದೆಯಂದಿರಬೇಕು. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ” ಎಂದೆಲ್ಲಾ ಎಕ್ಸ್‌ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಅಂಥ ಅವಹೇಳನಕಾರಿ ಕಾಮೆಂಟ್‌ಗಳಿಗೆ ಮರು ಉತ್ತರ ನೀಡಿರುವ ಚಿನ್ಮಯಿ ಶ್ರೀಪಾದಾ ತರಾಟೆಗೆ ತೆಗೆದುಕೊಂಡಿದ್ದಾರೆ. ತೀರಾ ಬೋಲ್ಡ್‌ ಆಗಿ ಪ್ರತಿಕ್ರಿಯೆ ನೀಡಿರುವ ಅವರು “ನೀವು ಸುಶಿಕ್ಷಿತರಾಗಿದ್ದರೆ ಮಾತ್ರ ತಿಳಿದಿರುತ್ತದೆ. ವೀರ್ಯ ಮತ್ತು ಅಂಡಾಣು ಒಂದು ಹುಟ್ಟಿಗೆ ಕಾರಣವಾಗುತ್ತದೆ. ನೀವು ನನ್ನ ಹುಟ್ಟಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇನ್ನು ನೀವು ನನ್ನನ್ನು ವೇಶ್ಯೆ ಎಂದು ಕರೆದಿದ್ದೀರಿ. ನಿಮ್ಮಂಥವರ ನೆರಳು ಕೂಡ ನನ್ನನ್ನು ಸೋಕುವುದಿಲ್ಲ. ಅನೇಕರು ತಮ್ಮನ್ನು ಪುರುಷರ ಹಕ್ಕುಗಳ ಪ್ರತಿಪಾದಕರೆಂದುಕೊಂಡಿರುವುದು ಹಾಸ್ಯಾಸ್ಪದ” ಎಂದಿದ್ದಾರೆ. ಚಿನ್ಮಯಿ ಶ್ರೀಪಾದ ಅವರ ಈ ಪ್ರತಿಕ್ರಿಯೆ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ವೈರಮುತ್ತು ಮತ್ತು ಚಿನ್ಮಯಿ ಶ್ರೀಪಾದಾ ಪ್ರಕರಣ

ನಾಲ್ಕೈದು ವರ್ಷಗಳ ಹಿಂದೆ ಮೀಟೂ ಮೂಲಕ ಬಿರುಗಾಳಿ ಎಬ್ಬಿಸಿದ್ದ ಚಿನ್ಮಯಿ ತಮಿಳಿನ ಖ್ಯಾತ ಗೀತ ಸಾಹಿತಿ ವೈರಮುತ್ತು ವಿರುದ್ಧ ಟ್ವೀಟ್‌ ಮಾಡಿದ್ದರು. ವೈರಮುತ್ತು ವಿರುದ್ಧ ತಾನು ಹೇಳಿಕೆ ನೀಡಿದಾಗ ಕೆಲವು ಪತ್ರಕರ್ತರು ನನ್ನನ್ನು ಬಾಯಿಗೆ ಬಂದಂತೆ ಬೈದಿದ್ದರು ಎಂದಿದ್ದರು.

ಹಲವು ಚೆನ್ನೈ ಪತ್ರಕರ್ತರ ಮೇಲೆ ಕೆಂಡಕಾರಿದ್ದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ, ತಮಿಳಿನ ಖ್ಯಾತ ಗೀತರಚನೆಕಾರ ವೈರಮುತ್ತು ತನಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಮಾಧ್ಯಮಮಗಳ ಮುಂದೆ ಬಹಿರಂಗಪಡಿಸಿದ್ದಕ್ಕೆ ತನ್ನನ್ನು ಬಾಯಿಗೆ ಬಂದಂತೆ ಬೈದಿದ್ದಾಗಿ ತಿಳಿಸಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಲು ಸಾಲು ಟ್ವೀಟ್ ಮಾಡಿದ್ದರು.

“ವೈರಮುತ್ತು ನನಗೆ ಲೈಂಗಿಕ ಕಿರುಕುಳ ನೀಡಿದ ಎಂಬುದನ್ನು ಬಹಿರಂಪಡಿಸಿದಾಗ ತಮಿಳುನಾಡಿನ ಕೆಲವು ವಕ್ತಿಗಳು, ಹಲವು ಪತ್ರಕರ್ತರು ನನ್ನ ಬಗ್ಗೆ ಬಾಯಿಬಂದಂತೆ ಮಾತನಾಡಿದಾರು. ನನಗೆ ನಾಚಿಕೆ ಎಂಬುದು ಏನಾದರೂ ಉಳಿದಿದ್ದರೆ ಸಾಯಬೇಕಾಗಿತ್ತು ಎಂದಿದ್ದಾರೆ. ನನ್ನಂತಹವರಿಂದಲೇ ನಿಜವಾಗಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ” ಎಂದಿದ್ದರು.

ಈ ಸುದ್ದಿಯನ್ನೂ ಓದಿ:Actor Mukesh: ಮೀಟೂ ಕೇಸ್‌- ಮಲಯಾಳಂ ನಟ ಮುಖೇಶ್‌ ಅರೆಸ್ಟ್‌