Thursday, 19th September 2024

ನೀರಿನ ಟ್ಯಾಂಕ್‌ನಿಂದ ಕ್ಲೋರಿನ್ ಅನಿಲ ಸೋರಿಕೆ: 15 ಮಂದಿ ಆಸ್ಪತ್ರೆಗೆ ದಾಖಲು

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುಧವಾರ ತಡರಾತ್ರಿ ನೀರಿನ ಟ್ಯಾಂಕ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದ್ದು ಇಬ್ಬರು ಮಕ್ಕಳು ಸೇರಿದಂತೆ 15 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭೋಪಾಲ್‌ನ ಈದ್ಗಾ ಪ್ರದೇಶದಲ್ಲಿರುವ ಮದರ್ ಇಂಡಿಯಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ನಗರದ ಮದರ್ ಇಂಡಿಯಾ ಕಾಲೋನಿಯಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಅಳವಡಿಸಲಾಗಿದ್ದ ಕ್ಲೋರಿನ್ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿದೆ. ಇದರ ಪರಿಣಾಮವಾಗಿ ಹಲವರಿಗೆ ಕಣ್ಣುಗಳಲ್ಲಿ ಉರಿ ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು.

ಟ್ಯಾಂಕ್‌ನಿಂದ ಕ್ಲೋರಿನ್ ಅನಿಲ ಬಿಡುಗಡೆ ಯಾಗಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ. ನೀರಿನಲ್ಲಿ ಕ್ಲೋರಿನ್ ಹೆಚ್ಚಿರುವುದರಿಂದ ಸಮಸ್ಯೆ ಉಂಟಾಗಿದೆ, ಆದರೂ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವ ವಿಶ್ವಾಸ್ ಸಾರಂಗ್, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಜನರು ಭಯಪಡ ಬಾರದು. ಕಣ್ಣಿನ ಉರಿ ಅಥವಾ ಉಸಿರಾಟದ ತೊಂದರೆಗಳ ಬಗ್ಗೆ ದೂರು ನೀಡುವ ಯಾವುದೇ ವ್ಯಕ್ತಿಗೆ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಈ ಹಂತದಲ್ಲಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಸಮಸ್ಯೆ ಹೇಗೆ ಸಂಭವಿಸಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು ಎಂದರು.

ಘಟನೆಯು ಸಾರ್ವಜನಿಕರಲ್ಲಿ ಭೀತಿಯನ್ನು ಉಂಟುಮಾಡಿದೆ. ಏಕೆಂದರೆ 1984 ರಲ್ಲಿ ರಾಜ್ಯ ರಾಜಧಾನಿಯ ಜನರು ಅದೇ ಪರಿಸ್ಥಿತಿಗೆ ಸಾಕ್ಷಿಯಾಗಿದ್ದರು. ವಿಷಕಾರಿ ಅನಿಲ ಸೋರಿಕೆಯು ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಲಕ್ಷಾಂತರ ಜನರನ್ನು ಬಾಧಿಸಿತ್ತು.