ಕೊಲ್ಕತ್ತಾ: ಬಾಡಿಗಾರ್ಡ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ, ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಸಿಐಡಿ ಸಮನ್ಸ್ ಜಾರಿ ಮಾಡಿದೆ.
ಸೆ.೦೬ರಂದು ಕೊಲ್ಕತ್ತಾದಲ್ಲಿನ ಭವಾನಿ ಭವನ್ ನಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ವಿಚಾರಣಾಧಿಕಾರಿಗಳ ಮುಂದೆ ಹಾಜರಾಗುವಂತೆ ನಂದಿಗ್ರಾಮದ ಭಾರತೀಯ ಜನತಾ ಪಾರ್ಟಿ ಶಾಸಕರಾಗಿರುವ ಸುವೇಂದುಗೆ ಸೂಚಿಸಲಾಗಿದೆ ಎಂದು ಹೇಳಿದರು. ಸುವೇಂದು ಅಧಿಕಾರಿ ಅಂಗರಕ್ಷಕ ಸುಬಾಭ್ರತಾ ಚಕ್ರವರ್ತಿ ತನ್ನ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ. ಈ ಪ್ರಕರಣದ ತನಿಖೆಗಾಗಿ ತಂಡ ವೊಂದನ್ನು ಸಿಐಡಿ ರಚಿಸಿತ್ತು.
ವಿಚಾರಣೆ ಭಾಗವಾಗಿ ಈವರೆಗೆ 11 ಪೊಲೀಸರು ಸೇರಿದಂತೆ 15 ಮಂದಿಯನ್ನು ಸಿಐಡಿ ವಿಚಾರಣೆ ನಡೆಸಿದೆ. ಈ ಹಿಂದೆ ಪೂರ್ವ ಮಿಡ್ನಾಪುರದಲ್ಲಿರುವ ಅಧಿಕಾರಿ ಯ ನಿವಾಸ ‘ಶಾಂತಿ ಕುಂಜ್’ ಗೂ ಸಿಐಡಿ ತಂಡ ಭೇಟಿ ನೀಡಿತ್ತು.
ಪಶ್ಚಿಮ ಬಂಗಾಳ ರಾಜ್ಯ ಸಶಶ್ತ್ರ ಪೊಲೀಸ್ ಸಿಬ್ಬಂದಿಯಾಗಿದ್ದ ಚಕ್ರವರ್ತಿ, ಅಧಿಕಾರಿ ಟಿಎಂಸಿಯ ಸಂಸದರಾಗಿದ್ದ ಅವಧಿಯಲ್ಲಿ ಭದ್ರತಾ ತಂಡದಲ್ಲಿದ್ದರು. 2015ರಲ್ಲಿ ಅಧಿಕಾರಿ ಸಚಿವರಾದಾಗಲೂ ಭದ್ರತಾ ಸಿಬ್ಬಂದಿಯಾಗಿ ಮುಂದುವರೆದಿದ್ದರು.