ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ಶುಕ್ರವಾರ ನಟಿ ಹಾಗೂ ನೃತ್ಯಪಟು ಸುಧಾ ಚಂದ್ರನ್ ಅವರಲ್ಲಿ ಕ್ಷಮೆ ಕೇಳಿದೆ.
ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಭದ್ರತಾ ತಪಾಸಣೆಯ ಸಂದರ್ಭದಲ್ಲಿ ಕೃತಕ ಕಾಲನ್ನು ಬಿಚ್ಚಿ ತೋರಿಸುವಂತೆ ಸೂಚಿಸುವ ಮೂಲಕ ಅವಮಾನ ಮಾಡಲಾಗಿತ್ತು. ಈ ಸಂಬಂಧ ಸಿಐಎಸ್‌ಎಫ್ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ. ಶ್ರೀಮತಿ ಸುಧಾ ಚಂದ್ರನ್ ಅವರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸು ತ್ತೇವೆ.
ಪ್ರೋಟೋ ಕಾಲ್ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಭದ್ರತಾ ತಪಾಸಣೆಗಾಗಿ ಪ್ರಾಸ್ಥೆಟಿಕ್ಸ್ ಅನ್ನು ತೆಗೆದು ಹಾಕಲಾಗುತ್ತದೆ. ಪ್ರಾಸ್ಥೆಟಿಕ್ಸ್ ಅನ್ನು ತೆಗೆದುಹಾಕಲು ಸಂಬಂಧಿಸಿದ ಮಹಿಳಾ ಸಿಬ್ಬಂದಿ ಶ್ರೀಮತಿ ಸುಧಾ ಚಂದ್ರನ್ ಅವರನ್ನು ಏಕೆ ವಿನಂತಿಸಿದರು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಸಿಐಎಸ್‌ಎಫ್ ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಉದ್ದೇಶದಿಂದ ತಮ್ಮ ಕೃತಕ ಕಾಲುಗಳನ್ನು ಪ್ರತಿ ಬಾರಿ ಬಿಚ್ಚಿ ತೋರಿಸಲು ಹೇಳುತ್ತಾರೆ. ಇದು ಬಹಳ ನೋವಾಗುತ್ತದೆ ಎಂದು ಸುಧಾ ಅವರು ಹೇಳಿಕೊಂಡಿದ್ದರು. ಈ ಕುರಿತು ವಿಡಿಯೋದಲ್ಲಿ ಮಾತನಾಡಿದ್ದ ಅವರು, ”ಇದು ಅತ್ಯಂತ ವೈಯಕ್ತಿಕ ವಿಷಯವಾದರೂ, ಸರ್ಕಾರಕ್ಕೆ ಹಾಗೂ ನೆಚ್ಚಿನ ಪ್ರಧಾನಿಗಳ ಗಮನಕ್ಕೆ ತರುವ ಉದ್ದೇಶದಿಂದ ನಟಿ ಹಾಗೂ ನೃತ್ಯಪಟುವಾದ ನಾನು ವಿಡಿಯೋ ಮಾಡುತ್ತಿದ್ದೇನೆ.
ಕೃತಕ ಕಾಲುಗಳ ಮುಖಾಂತರ ನೃತ್ಯ ಮಾಡಿ ಇತಿಹಾಸ ಸೃಷ್ಟಿಸಿದ ನಾನು ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದೇನೆ. ಆದರೆ ನಾನು ಕಾರ್ಯದ ನಿಮಿತ್ತ ಪ್ರತಿ ಬಾರಿ ವಿಮಾನ ನಿಲ್ದಾಣಗಳಿಗೆ ತೆರಳಿದಾಗಲೂ ಭದ್ರತಾ ತಂಡದವರು ನಿಲ್ಲಿಸುತ್ತಾರೆ. ಅವರಿಗೆ ನನ್ನ ಕೃತಕ ಕಾಲುಗಳನ್ನು ಇಟಿಡಿ (ಸ್ಫೋಟ ಪರಿಶೀಲನಾ ಸಾಧನ) ಮುಖಾಂತರ ಪರಿಶೀಲಿಸಿ ಎಂದು ಮನವಿ ಮಾಡಿಕೊಂಡರೂ, ಅವರು ಕೇಳದೇ- ಕೃತಕ ಕಾಲನ್ನು ತೆಗೆಸಿ ಪರಿಶೀಲಿಸುತ್ತಾರೆ” ಎಂದು ಸುಧಾ ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು.