Sunday, 15th December 2024

ಸಿಟಿಬ್ಯಾಂಕ್ ಜತೆಗಿನ ಒಪ್ಪಂದ: ಆಕ್ಸಿಸ್ ಬ್ಯಾಂಕಿಗೆ 5,728.4 ಕೋಟಿ ರೂ ನಿವ್ವಳ ನಷ್ಟ

ಮುಂಬೈ: ಭಾರತದ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಜನವರಿ ಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ 5,728.4 ಕೋಟಿ ರೂ ನಿವ್ವಳ ನಷ್ಟ ತೋರಿಸಿದೆ.

ಆಯಕ್ಸಿಸ್ ಬ್ಯಾಂಕ್ ಮತ್ತು ಸಿಟಿಬ್ಯಾಂಕ್ ಇಂಡಿಯಾ ಒಪ್ಪಂದವೇ ಈ ಪರಿ ಹಿನ್ನಡೆ ಕಾಣಲು ಕಾರಣವಾಗಿದೆ ಎನ್ನಲಾಗಿದೆ.

ಸಿಟಿಬ್ಯಾಂಕ್ ಇಂಡಿಯಾವನ್ನು ವಿಲೀನ ಮಾಡುವ ಈ ಡೀಲ್​ನಿಂದ ಆಯಕ್ಸಿಸ್ ಬ್ಯಾಂಕ್​ಗೆ ಬರೋಬ್ಬರಿ 12,490 ಕೋಟಿ ರೂ ನಷ್ಟ ಆಗಿರುವುದು ವರದಿಯಾಗಿದೆ. ಒಂದು ವೇಳೆ ಒಪ್ಪಂದ ಆಗಿಲ್ಲದೇ ಹೋಗಿದ್ದರೆ ಭರ್ಜರಿ ಲಾಭ ಕಾಣಬಹುದಾಗಿತ್ತು.

ಡೀಲ್​ನಿಂದಾದ ನಷ್ಟವನ್ನು ತೆಗೆದಿಟ್ಟು ನೋಡಿದರೆ ಈ ವರ್ಷ ಮೊದಲ ಮೂರು ತಿಂಗಳ ಅವಧಿಯಲ್ಲಿ ಆಯಕ್ಸಿಸ್ ಬ್ಯಾಂಕ್ 6,625 ಕೋಟಿ ರೂ ಲಾಭ ಕಾಣುತ್ತಿತ್ತು. ಕಳೆದ ವರ್ಷದ ಆಯಕ್ಸಿಸ್ ಬ್ಯಾಂಕ್ 4,118 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಅದರ ನಿವ್ವಳ ಲಾಭ ಶೇ. 61ರಷ್ಟು ಹೆಚ್ಚಾಗುತ್ತಿತ್ತು. ಈ ನಿರೀಕ್ಷೆ ಮೀರಿದಷ್ಟು ಲಾಭವನ್ನು ಆಯಕ್ಸಿಸ್ ಕಂಡಿದೆ. ಅದರ ದುರದೃಷ್ಟಕ್ಕೆ ಸಿಟಿಬ್ಯಾಂಕ್ ಇಂಡಿಯಾದ ಒಪ್ಪಂದದಿಂದ ಆದ ನಷ್ಟವು ಅದರ ಭರ್ಜರಿ ಲಾಭವನ್ನು ಪೂರ್ಣವಾಗಿ ಮಸುಕಾಗಿಸಿದೆ.

ಬಡ್ಡಿಯಿಂದ ಬಂದ ಆದಾಯ 2023 ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಆಯಕ್ಸಿಸ್ ಬ್ಯಾಂಕ್ ಶೇ. 33ರಷ್ಟು ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಇದರ ನಿವ್ವಳ ಬಡ್ಡಿ ಆದಾಯ 11,742 ಕೋಟಿ ರೂ ದಾಖಲಾಗಿದೆ. ಇತರ ಮೂಲಗಳಿಂದ ಆಯಕ್ಸಿಸ್ ಬ್ಯಾಂಕ್​ಗೆ 4,895 ಕೋಟಿ ರೂ ಆದಾಯ ಬಂದಿದೆ.

ಆಯಕ್ಸಿಸ್ ಬ್ಯಾಂಕ್ ತನ್ನ ತ್ರೈಮಾಸಿಕ ವರದಿಯಲ್ಲಿ ನಷ್ಟ ತೋರಿಸುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಅದರ ಷೇರು ಬೆಲೆ ಕುಸಿಯತೊಡಗಿದೆ. ಏಪ್ರಿಲ್ 28 ಶುಕ್ರವಾರ 890 ರೂ ಇದ್ದ ಆಯಕ್ಸಿಸ್ ಬ್ಯಾಂಕ್ ಷೇರು ಬೆಲೆ ಮಧ್ಯಾಹ್ನ 855 ರುಪಾಯಿಗೆ ಇಳಿದಿತ್ತು. ಅಂದರೆ ಸುಮಾರು 35 ರುಪಾಯಿಗಳಷ್ಟು ಕುಸಿತ ಕಂಡಿದೆ.