ಮುಂಬೈ: ʼʼರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ (Ayodhya Ram Mandir dispute)ದ ಇತ್ಯರ್ಥಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅಯೋಧ್ಯೆ ರಾಮ ಜನ್ಮಭೂಮಿ-ಬಾಬರಿ ಮಸೀದಿಯ ಐತಿಹಾಸಿಕ ವಿವಾದದ ಬಗ್ಗೆ ತೀರ್ಪು ಪ್ರಕಟಿಸುವ ಮೊದಲು ಪರಿಹಾರಕ್ಕಾಗಿ ದೇವರಲ್ಲಿ ಕೋರಿದ್ದೇನೆʼʼ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (CJI Chandrachud) ಹೇಳಿದರು. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಂಬಿಕೆಯ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ʼʼಕೆಲವೊಂದು ಪ್ರಕರಣಗಳಿಗೆ ಬೇಗ ಪರಿಹಾರ ಸಿಗುವುದಿಲ್ಲ. ಅಂತಹದ್ದೇ ಒಂದು ಪ್ರಕರಣ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ. ಆಗ ನಾನು ದೇವರ ಮುಂದೆ ಕುಳಿತು ಪರಿಹಾರವನ್ನು ತೋರುವಂತೆ ಪ್ರಾರ್ಥಿಸಿದ್ದೆʼʼ ಎಂದು ಅವರು ತಿಳಿಸಿದರು. “ನನ್ನನ್ನು ನಂಬಿ. ನಿಮಗೆ ನಂಬಿಕೆ ಇದ್ದರೆ, ದೇವರು ಯಾವಾಗಲೂ ಒಂದು ಮಾರ್ಗವನ್ನು ತೋರಿಸುತ್ತಾನೆ” ಎಂದು ಹೇಳಿದರು.
Pune: CJI D.Y. Chandrachud said, "…I was handling the Ayodhya case, and we had been working on it for three months. The question before me was, 'How do we find a way out of this?' I prayed to God and sought help before making a decision. I worship God daily, and on that day… pic.twitter.com/SUyFxguOvJ
— IANS (@ians_india) October 21, 2024
ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು 2019ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಮೂಲಕ ಒಂದು ಶತಮಾನಕ್ಕೂ ಹೆಚ್ಚು ಹಿಂದಿನ ವಿವಾದಾತ್ಮಕ ಸಮಸ್ಯೆಯನ್ನು ಇತ್ಯರ್ಥಪಡಿಸಿತು.
ಈ ವರ್ಷದ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲಕ ರಾಮನ ವಿಗ್ರಹಕ್ಕೆ ಪ್ರಾನ ಪ್ರತಿಷ್ಠೆ ನೆರವೇರಿತು. ಪ್ರದಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಜುಲೈಯಲ್ಲಿ ಚಂದ್ರಚೂಡ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
ಚಂದ್ರಚೂಡ್ ಹೇಳಿಕೆಗೆ ಟೀಕೆ
ಅಯೋಧ್ಯೆ ಸಮಸ್ಯೆ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ ಎಂದು ಹೇಳಿಕೆ ನೀಡಿದ್ದ ಡಿ.ವೈ.ಚಂದ್ರಚೂಡ್ ವಿರುದ್ಧ ಸಮಾಜವಾದಿ ಪಕ್ಷ ಸಂಸದ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ʼʼಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಮ್ ಗೋಪಾಲ್ ಯಾದವ್, ನಾನು ಈ ಬಗ್ಗೆ ಉತ್ತರಿಸಲು ಬಯಸುವುದಿಲ್ಲ. ನೀವು ದೆವ್ವಗಳನ್ನು ಮತ್ತೆ ಜೀವಂತಗೊಳಿಸಿದಾಗ, ನೀವು ಸತ್ತವರನ್ನು ಮತ್ತೆ ಬದುಕಿಸಿದಾಗ, ಅವರು ದೆವ್ವಗಳಾಗುತ್ತಾರೆ ಮತ್ತು ನ್ಯಾಯವನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಅವರು ಈಗ ಎಲ್ಲಿದ್ದಾರೆ? ಅದನ್ನು ಬಿಡಿ ಅಂತಹ ಜನರು ಅಂತಹ ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ. ನಾನು ಅವರನ್ನು ಗಂಭೀರವಾಗಿ ಪರಿಗಣಿಸಬೇಕೆ?” ರಾಮ್ ಗೋಪಾಲ್ ಯಾದವ್ ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು.
ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ದೇಶದ ಮುಖ್ಯ ನ್ಯಾಯಮೂರ್ತಿ ವಿರುದ್ಧ ಇಂತಹ ಭಾಷಾ ಪ್ರಯೋಗ ಸರಿಯಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ರಾಮ್ ಗೋಪಾಲ್ ಯಾದವ್ ಸ್ಪಷ್ಟನೆ ನೀಡಿದ್ದಾರೆ. “ಸಿಜೆಐ ಬಗ್ಗೆ ಯಾರೂ ನನ್ನನ್ನು ಏನನ್ನೂ ಕೇಳಲಿಲ್ಲ. ಸಿಜೆಐ ಬಹಳ ಪ್ರತಿಷ್ಠಿತ ವ್ಯಕ್ತಿ. ನಾನು ಅವನ ಮೇಲೆ ಯಾವುದೇ ಕಮೆಂಟ್ ಮಾಡಿಲ್ಲ. ಬಹ್ರೈಚ್ ಹಿಂಸಾಚಾರ ಬಗ್ಗೆ ನನ್ನನ್ನು ಪ್ರಶ್ನೆ ಮಾಡಲಾಗಿತ್ತು ನಾನು ಅದಕ್ಕೆ ಉತ್ತರಿಸಿದ್ದೆ” ಅಷ್ಟೇ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: SP Leader controversy: CJI ವಿರುದ್ಧ ಅವಹೇಳನಕಾರಿ ಹೇಳಿಕೆ; ಎಸ್ಪಿ ಸಂಸದನಿಂದ ಭಾರೀ ವಿವಾದ; ಬಳಿಕ ಯೂಟರ್ನ್