Sunday, 15th December 2024

CJI Chandrachud: ಯಾ ಯಾ ಅನ್ನೋಕೆ ಇದು ಕಾಫಿ ಶಾಪ್‌ ಅಲ್ಲ..ಕೋರ್ಟ್;‌ ಸಿಜೆಐ ಚಂದ್ರಚೂಡ್‌ ರೇಗಿದ್ದೇಕೆ?

CJI Chandrachud

ನವದೆಹಲಿ: ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಪದಬಳಕೆಗಳ ಬಗ್ಗೆ ಸುಪ್ರೀಂ ಕೋರ್ಟ್‌(Supreme court) ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌(CJI Chandrachud) ವಕೀಲರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಕ್ಕೆ ಭಾರತದ ಸರ್ವೋಚ್ಛ ನ್ಯಾಯಾಲಯ ಸಾಕ್ಷಿಯಾಯಿತು. ಪ್ರತಿಬಾರಿಯೂ ಯಾ ಯಾ ಎಂದು ಹೇಳುವ ಬದಲು ಸರಿಯಾದ ಪದ ಯೆಸ್‌ ಅಥವಾ ಹೌದು ಎಂದು ಬಳಸಿ. ಯಾ..ಯಾ… ಎಂದು ಹೇಳಲು ಇದು ಕಾಫಿ ಶಾಪ್‌ ಅಲ್ಲ…ಕೋರ್ಟ್‌ ಎಂದು ವಕೀಲರನ್ನು ಎಚ್ಚರಿಸಿದ ಘಟನೆ ವರದಿಯಾಗಿದೆ.

ಏನಿದು ಘಟನೆ?

ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಆಂತರಿಕ ತನಿಖೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ, ಪ್ರತಿವಾದಿಯಾಗಿ ನ್ಯಾಯಾಧೀಶರೊಂದಿಗೆ ನೀವು PIL ಅನ್ನು ಹೇಗೆ ಸಲ್ಲಿಸಬಹುದು” ಎಂದು ಚಂದ್ರಚೂಡ್ ಕೇಳಿದಾಗ, ವಕೀಲರು ಯಾ ಯಾ, ಆಗಿನ CJI ರಂಜನ್ ಗೊಗೊಯ್ ಎಂದು ಹೇಳಲು ಪ್ರಾರಂಭಿಸಿದರು. ಅವರ ಮಾತನ್ನು ಅಲ್ಲೇ ತಡೆದ ಚಂದ್ರಚೂಡ್‌, “ಯಾ ಯಾ ಯಾ ಎಂದು ಹೇಳಬೇಡಿ. ಹೌದು ಎಂದು ಹೇಳಿ. ಇದು ಕಾಫಿ ಶಾಪ್ ಅಲ್ಲ. ಇದು ಕೋರ್ಟ್. ಜನರು ಯಾ ಎಂದು ಹೇಳುವುದು ನನಗೆ ಸ್ವಲ್ಪ ಅಲರ್ಜಿ ಎಂದು ತೀಕ್ಷ್ಣವಾಗಿ ಹೇಳಿದರು.

ನ್ಯಾಯಮೂರ್ತಿ ಗೊಗೋಯ್ ಅವರು ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾಗಿದ್ದರು. ನೀವು ನ್ಯಾಯಾಧೀಶರ ವಿರುದ್ಧ ಈ ರೀತಿಯ ಮನವಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಮತ್ತು ನೀವು ಪೀಠದ ಮುಂದೆ ಯಶಸ್ವಿಯಾಗದ ಕಾರಣ ಆಂತರಿಕ ವಿಚಾರಣೆಯನ್ನು ಕೋರಲು ಸಾಧ್ಯವಿಲ್ಲ” ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಇಂದು ಮಹತ್ವದ ಕೇಸ್‌ಗಳ ವಿಚಾರಣೆ

ಇನ್ನು ಇಂದು ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಕೇಸ್‌ಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪ್ರಸಿದ್ಧ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಹಲವು ಅರ್ಜಿಗಳ ವಿಚಾರಣೆ ನಡೆಸಲಿದೆ. ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವಾಗಿ ವಿತರಿಸಲಾದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ.

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಮತ್ತು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷರು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಇದಲ್ಲದೆ, ಕಳೆದ ತಿಂಗಳು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣವನ್ನು ಸಹ ವಿಚಾರಣೆ ನಡೆಸಲಿದೆ. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಮಧ್ಯಾಹ್ನ 2 ರಿಂದ ವಿಚಾರಣೆ ನಡೆಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ಸಿಜೆಐ ಚಂದ್ರಚೂಡ್‌ ಮನೆಯಲ್ಲಿ ಪ್ರಧಾನಿ ಮೋದಿ: ವಿಪಕ್ಷ ಟೀಕೆ, ಹೋದರೇನು ತಪ್ಪು ಎಂದ ಬಿಜೆಪಿ