Wednesday, 23rd October 2024

CJI Chandrachud: ನ.10ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್‌ ಸಿಜೆಐ ಡಿ.ವೈ. ಚಂದ್ರಚೂಡ್ ಹಿನ್ನೆಲೆ ಹೀಗಿದೆ

D.Y. Chandrachud

ಅಯೋಧ್ಯೆ ವಿವಾದ (Ayodhya case), ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ (Sabarimala case) ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ತೀರ್ಪು ನೀಡಿರುವ ಭಾರತದ ಸುಪ್ರೀಂ ಕೋರ್ಟ್‌ನ (Indian Supreme Court) 50ನೇ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ್ (CJI Chandrachud) ಅವರು 2024ರ ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು 2022ರ ಅಕ್ಟೋಬರ್ 10ರಂದು ಮುಖ್ಯ ನ್ಯಾಯಮೂರ್ತಿ ಯು. ಲಲಿತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನಾಗಿ ಶಿಫಾರಸು ಮಾಡಿದ್ದರು.

ಆರಂಭಿಕ ಜೀವನ ಹೇಗಿತ್ತು?

ಧನಂಜಯ ಯಶವಂತ್ ಚಂದ್ರಚೂಡ್ ಅವರು 1959ರ ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ಅವರ ತಂದೆ ಯಶವಂತ ವಿಷ್ಣು ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 16ನೇ ಸಿಜೆಐ ಆಗಿದ್ದರು. 1978ರ ಫೆಬ್ರವರಿ 22ರಿಂದ 1985ರ ಜುಲೈ 11ರವರೆಗೆ ಸುದೀರ್ಘ ಕಾಲ ಸಿಜೆಐ ಆಗಿ ಅವರು ಸೇವೆ ಸಲ್ಲಿಸಿದ್ದರು. ಡಿ.ವೈ. ಚಂದ್ರಚೂಡ್ ಅವರು ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಅಧ್ಯಯನ ಮಾಡಿ, ಬಳಿಕ 1982ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪೂರ್ಣಗೊಳಿಸಿದರು. 1986ರಲ್ಲಿ ಅಮೆರಿಕದ ಹಾರ್ವರ್ಡ್ ಲಾ ಸ್ಕೂಲ್‌ನಿಂದ ಎಲ್‌ಎಲ್‌ಎಂ ಪದವಿ ಮತ್ತು ನ್ಯಾಯಾಂಗ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು.

ವೃತ್ತಿ ಜೀವನ

ಹಾರ್ವರ್ಡ್‌ನಿಂದ ಪದವಿ ಪಡೆದ ಬಳಿಕ ಚಂದ್ರಚೂಡ್ ಅವರು ಬಾಂಬೆ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದರು. 1998ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್‌ಗೆ ಹಿರಿಯ ವಕೀಲರಾಗಿ ನೇಮಕಗೊಂಡರು. 2000ರ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ಆಯ್ಕೆಯಾದರು. 2013ರ ಅಕ್ಟೋಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2016ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡರು.

ಪ್ರಮುಖ ತೀರ್ಪುಗಳು

ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಸುಪ್ರೀಂ ಕೋರ್ಟ್‌ ಹಲವು ಗಮನಾರ್ಹ ತೀರ್ಪುಗಳನ್ನು ನೀಡಿದೆ. ಇದರಲ್ಲಿ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಆಧಾರ್ ಅನ್ನು ಅಸಂವಿಧಾನಿಕವಾಗಿ ಅಂಗೀಕರಿಸಲಾಗಿದೆ ಎಂದು ತೀರ್ಪು ನೀಡಲಾಗಿತ್ತು. ಶಬರಿಮಲೆ ದೇವಾಲಯ ಪ್ರವೇಶ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿದ್ದ ಚಂದ್ರಚೂಡ್, ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರುವುದು ಸಾಂವಿಧಾನಿಕ ನೈತಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

Bomb Threat : ಲಂಡನ್- ದೆಹಲಿ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿತ್ತು ಸಂದೇಶ

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಐವರು ಮಾನವ ಹಕ್ಕುಗಳ ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ರೊಮಿಲಾ ಥಾಪರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಚಂದ್ರಚೂಡ್ ಅವರು ಸಂವಿಧಾನದ 19 ಮತ್ತು 21ನೇ ವಿಧಿಗಳನ್ನು ಉಲ್ಲೇಖಿಸಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಿದ್ದರು. ಇನ್ನು ಅಯೋಧ್ಯೆ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಚಂದ್ರಚೂಡ್ ಕೂಡ ಇದ್ದರು. ಈ ಐತಿಹಾಸಿಕ ತೀರ್ಪಿಗೆ ಇವರು ಸಾಕ್ಷಿಯಾಗಿದ್ದರು.