Saturday, 14th December 2024

ಭಾರೀ ಬೆಂಕಿಗೆ ಹಳೆಯ ಪ್ರತಿಷ್ಠಿತ ಕ್ಲಬ್‌ ಧ್ವಂಸ, ರೂ. 35-40 ಕೋಟಿ ಹಾನಿ

ಹೈದರಾಬಾದ್: ಭಾನುವಾರ ಸಂಭವಿಸಿದ ಭಾರೀ ಬೆಂಕಿಯಲ್ಲಿ ಭಾರತದ ಅತ್ಯಂತ ಹಳೆಯ ಪ್ರತಿಷ್ಠಿತ ಕ್ಲಬ್‌ ಧ್ವಂಸವಾಗಿದೆ. 1878 ರಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಸಿಕಂದರಾಬಾದ್ ಕ್ಲಬ್ ಭಾರತದ ಐದು ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿದೆ.

ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ರೂ. 35-40 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

“ಕ್ಲಬ್ ಪದಾಧಿಕಾರಿಗಳು ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ . ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಕಾರ್ಯವಿಧಾನಗಳ ಪ್ರಕಾರ ತನಿಖೆ ನಡೆಸುತ್ತಾರೆ” ಎಂದು ಪೊಲೀಸ್ ಮುಖ್ಯಸ್ಥರು ಹೇಳಿದರು.

50,000 ಚದರ ಅಡಿ ವಿಸ್ತೀರ್ಣದಲ್ಲಿರುವ ಕಟ್ಟಡವು ಹೆಚ್ಚಾಗಿ ಮರದಿಂದ ಮಾಡಲ್ಪಟ್ಟಿದೆ. ಹೀಗಾಗಿ ಅಗ್ನಿಶಾಮಕ ಮತ್ತು ಪೊಲೀಸ್ ರಕ್ಷಣಾ ಪ್ರಯತ್ನಗಳ ಹೊರತಾಗಿಯೂ ಕ್ಲಬ್‌ ಅನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಹೈದರಾಬಾದ್ ನಗರದ ಪೊಲೀಸ್ ಕಮಿಷನರ್ ಹೇಳಿದ್ದಾರೆ.

8,000 ಸದಸ್ಯರನ್ನು ಹೊಂದಿರುವ ಮತ್ತು ಹೈದರಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಾರಂಪರಿಕ ಸ್ಥಾನಮಾನ ಪಡೆದಿರುವ ಕ್ಲಬ್, ಕ್ರಿಕೆಟ್ ಮೈದಾನ ಮತ್ತು ಇತರ ಅನೇಕ ಹೊರಾಂಗಣ ಕ್ರೀಡಾ ಸೌಲಭ್ಯಗಳನ್ನು ಹೊಂದಿದೆ.