Saturday, 14th December 2024

ಕೋವಿಡ್’ನಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದ ಒಡಿಶಾ ಸಿಎಂ

ಭುವನೇಶ್ವರ್: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶುಕ್ರವಾರ 75ನೇ ವಯಸ್ಸಿಗೆ ಕಾಲಿರಿಸುತ್ತಿದ್ದಾರೆ. ಕೋವಿಡ್ 19ರ ಕಾರಣದಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.

ಒಡಿಶಾ ಮುಖ್ಯಮಂತ್ರಿಯಾಗಿ ಕಳೆದ ಮಾರ್ಚ್ ತಿಂಗಳಲ್ಲಿ ನವೀನ್ ಪಟ್ನಾಯಕ್ 20 ವರ್ಷಗಳನ್ನು ಪೂರೈಸಿದ್ದಾರೆ. ಅವರು ನಿರ್ಮಿಸಿರುವ ಹಲವು ದಾಖಲೆಗಳಲ್ಲಿ ರಾಜ್ಯದ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಒಂದು.

1997ರಲ್ಲಿ ಬಿಜು ಪಟ್ನಾಯಕ್ ಅವರ ನಿಧನದ ನಂತರ ಆಗಿನ ಜನತಾದಳ ಪಕ್ಷದ ಸಹೋದ್ಯೋಗಿ ಗಳು ನವೀನ್ ಪಟ್ನಾಯಕ್ ಅವರನ್ನು ತಂದೆಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು.

ಪಟ್ನಾಯಕ್ ಪ್ರಾಮಾಣಿಕ ಕೆಲಸಗಾರ ಮತ್ತು ಸುಧಾರಕ ಎಂಬ ಖ್ಯಾತಿ ಗಳಿಸಿದ್ದಾರೆ. ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅನುಮತಿ ನೀಡುವ ನಿರ್ಣಯ ವನ್ನು ರಾಜ್ಯ ವಿಧಾನಸಭೆಯಲ್ಲಿ ಫೆಬ್ರವರಿ ತಿಂಗಳಲ್ಲಿ ತೆಗೆದುಕೊಂಡಿದ್ದರು. ಇದರ ಬಳಿಕ 2021ರ ಸಾರ್ವತ್ರಿಕ ಜನಗಣತಿ ವೇಳೆ ಸಾಮಾಜಿಕ ಆರ್ಥಿಕ ಜಾತಿ ಗಣನೆಯನ್ನು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪಟ್ನಾಯಕ್ ಸರ್ಕಾರ ಮನವಿ ಮಾಡಿತ್ತು.

ಮಿ.ಕ್ಲೀನ್ ವರ್ಚಸ್ಸು ಹೊಂದಿರುವ ಪಟ್ನಾಯಕ್, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಒಲವು ಹೊಂದಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಆಡಳಿತಾರೂಢ ಬಿಜೆಡಿಯ ಮಾಜಿ ಶಾಸಕರನ್ನು ಬಂಧಿಸಲಾಗಿತ್ತು. ಅನೇಕ ಕಳಂಕಿತ ಅಧಿಕಾರಿಗಳು ರಾಜೀನಾಮೆ ನೀಡುವಂತೆ ಮಾಡಿದ್ದಲ್ಲದೆ, ಅವರ ಪಿಂಚಣಿಯನ್ನು ಸ್ಥಗಿತಗೊಳಿಸಿದ್ದಾರೆ.