Friday, 22nd November 2024

Coimbatore news: ತಾನು ʼಸೂಪರ್‌ಮ್ಯಾನ್‌ʼ ಎಂದುಕೊಂಡು 4ನೇ ಮಹಡಿಯಿಂದ ಹಾರಿದ ಯುವಕ!

Coimbatore news

ಚೆನ್ನೈ : ʼತಾನು ಸೂಪರ್‌ಮ್ಯಾನ್‌ʼ ಎಂದುಕೊಂಡು ಖಾಸಗಿ ಇಂಜಿನಿಯರಿಂಗ್ ಕಾಲೇಜಿನ 19 ವರ್ಷದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಜಿಗಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ(Coimbatore) ನಡೆದಿದೆ. ತಮಿಳುನಾಡಿನ ಕರ್ಪಗಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೋರ್ಸ್ ಓದುತ್ತಿರುವ ಮೂರನೇ ವರ್ಷದ ವಿದ್ಯಾರ್ಥಿ ಪ್ರಭು ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ತನಗೆ ಮಹಾಶಕ್ತಿಗಳಿದ್ದು, ತನಗೆ ಏನೂ ಹಾನಿಯಾಗುವುದಿಲ್ಲ ಎಂದು ತನ್ನ ಸ್ನೇಹಿತರಿಗೆ ಹೇಳಿದ್ದ.

ಪ್ರಭು, ನೀಲಿ ಶರ್ಟ್ ಧರಿಸಿ, ಕೊಠಡಿಯಿಂದ ಹೊರಬಂದು ಹಾಸ್ಟೆಲ್ ಕಾರಿಡಾರ್‌ಗೆ ಬಂದು ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಭು ಕಟ್ಟಡದಿಂದ ಹಾರುವ ಸಮಯದಲ್ಲಿ ಆತನ ಸ್ನೇಹಿತರು ಕಾರಿಡಾರ್‌ ಮೇಲೆ ನಿಂತು ಮಾತನಾಡುತ್ತಿದ್ದರು. ಏಕಾಏಕಿ ಪ್ರಭು ಹಾರುವ ದೃಶ್ಯ ನೋಡಿ ಆಘಾತಕ್ಕೊಳಗಾಗಿದ್ದಾರೆ. ಸೋಮವಾರ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕೂಡಲೇ ಆತನ ಸ್ನೇಹಿತರು ಆತನನ್ನು ಓತಕ್ಕಲ್ಮಂಡಪಂನಲ್ಲಿರುವ ಕರ್ಪಗಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್‌ ಜೀವ ಹಾನಿಯಾಗಿಲ್ಲ. ವಿದ್ಯಾರ್ಥಿಯ ಕೈ, ಕಾಲು ಮತ್ತು ತಲೆಗೆ ತೀವ್ರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Prakash Raj: ʻಗೌರಿ ಹತ್ಯೆ ಮತ್ತು ಮಗನ ಅಗಲಿಕೆ ಬದುಕಿನ ಅತಿ ದೊಡ್ಡ ದುರಂತ…ʼ ಭಾರೀ ವೈರಲ್‌ ಆಗ್ತಿದೆ ಪ್ರಕಾಶ್‌ ರಾಜ್ ಈ ವಿಡಿಯೋ

ಪ್ರಭು ಸೂಪರ್ ಹೀರೋಗಳಂತಹ ಮಹಾಶಕ್ತಿಗಳನ್ನು ಹೊಂದಿದ್ದೇನೆ ಮತ್ತು ಯಾವುದೇ ಕಟ್ಟಡದಿಂದ ಜಿಗಿದರೂ ತನಗೆ ಏನೂ ಅಗುವುದಿಲ್ಲ ಎಂದು ನಂಬಿದ್ದ. ಆಗಾಗ ತನ್ನ ರೂಂಮೇಟ್‌ಗಳ ಬಳಿ ತನಗಿರುವ ಶಕ್ತಿಯ ಬಗ್ಗೆ ಆತ ಮಾತನಾಡುತ್ತಿದ್ದ ಹಾಗೂ ಕಳೆದ ವಾರ ಯಾರೋ ತನ್ನ ಮೇಲೆ ಬ್ಲಾಕ್‌ ಮ್ಯಾಜಿಕ್‌ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಕಳೆದವಾರ ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿಯ 12 ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ್ದ . ಆದರೆ, ಅಕ್ಕಪಕ್ಕದ ಮನೆಯವರು ಸಕಾಲಕ್ಕೆ ಧಾವಿಸಿ ಆತನನ್ನು ತಡೆಯುವಲ್ಲಿ ಯಶಸ್ವಿಯಾದರು. ಕೆಲಸವನ್ನು ಕಳೆದುಕೊಂಡ ನಂತರ, ಅವನು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಪ್ರಯತ್ನಕ್ಕೆ ಇದೇ ಕಾರಣ ಎಂದು ಹೇಳಲಾಗುತ್ತಿದೆ.