ಭೋಪಾಲ್: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ ಐವರು ಸ್ಟ್ಯಾಂಡ್ ಅಪ್ ಕಾಮಿಡಿ ಯನ್ ಗಳನ್ನು ಬಂಧಿಸಲಾಗಿದೆ.
ಹಿಂದೂ ದೇವರು, ದೇವತೆಗಳನ್ನು ಅವಮಾನ ಮಾಡಿ ಹಾಸ್ಯ ಮಾಡಿರುವ ಆರೋಪದಲ್ಲಿ ಇಂದೋರ್ ನಲ್ಲಿ ಐವರು ಹಾಸ್ಯ ಕಲಾವಿದರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ಇಂದೋರ್ ಕೆಫೆಯೊಂದರಲ್ಲಿ ಹಾಸ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಖರ್ ವ್ಯಾಸ, ಪ್ರಿಯಂ ವ್ಯಾಸ್, ಮುನಾವರ್ ಫಾರುಖ್, ಎಡ್ವಿನ್ ಆಂಥೊನಿ ಹಾಗೂ ನಳಿನ್ ಯಾದವ್ ಎಂಬವರನ್ನು ಬಂಧಿಸಲಾಗಿದೆ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹಿಂದೂ ರಕ್ಷಕ ಸಂಘಟನೆ ಸದಸ್ಯರು ಬಂದು ಗಲಭೆಯೂ ಉಂಟಾಗಿತ್ತು. ಕೇಂದ್ರ ಸಚಿವ ಅಮಿತ್ ಶಾ ಕುರಿತೂ ಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಸ್ಯ ಕಲಾವಿದರು ಹಿಂದೂ ದೇವರು, ಹಿಂದೂ ಪದ್ಧತಿಗಳು ಹಾಗೂ ಅಮಿತ್ ಶಾ ವಿರುದ್ಧ ಅಸಭ್ಯ ಹೇಳಿಕೆ ನೀಡಿರುವ ಆರೋಪ ಕೇಳಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಹಾಸ್ಯ ಕಲಾವಿದರನ್ನು ಥಳಿಸುತ್ತಿರುವ ವಿಡಿಯೋ ತುಣುಕು ದೊರೆತಿದ್ದು, ಈ ಹಲ್ಲೆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸ್ ಠಾಣೆ ನಿರ್ವಾಹಕ ಕಮಲೇಶ್ ಶರ್ಮಾ ತಿಳಿಸಿದ್ದಾರೆ. ಐವರ ಮೇಲೆ ಪ್ರಕರಣ ದಾಖಲಾಗಿದೆ.