Saturday, 23rd November 2024

ವಾಣಿಜ್ಯ ಸಿಲಿಂಡರ್‌ ಬೆಲೆ 198 ರೂ ಕಡಿತ

ನವದೆಹಲಿ: ಜುಲೈ 1 ರಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 198 ರೂ ಕಡಿತ ಗೊಳಿಸಲಾಗಿದೆ ಎಂದು ವರದಿಯಾಗಿದೆ.

ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 182 ರೂಪಾಯಿ ಇಳಿಕೆಯಾಗಿದೆ. ಮುಂಬೈ ನಲ್ಲಿ ರೂ.190.50 ಮತ್ತು ಚೆನ್ನೈನಲ್ಲಿ ರೂ.187 ಇಳಿಕೆಯಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಸಹ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಮೊದಲು ಜೂನ್ 1 ರಿಂದ ಅನ್ವಯವಾಗುವಂತೆ 135 ರೂ. ಕಡಿಮೆ ಮಾಡಲಾಗಿತ್ತು.

 

ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಗ್ರಾಹಕರು ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಳೆದ ಮೇ ತಿಂಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಎರಡು ಬಾರಿ ಏರಿಕೆಯಾಗಿದೆ. ಮೇ 7 ರಂದು ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್‌ನ ದರವನ್ನು 50 ರುಪಾಯಿ ಹೆಚ್ಚಿಸಲಾಯಿತು ಮತ್ತು ಮೇ 19 ರಂದು ಮತ್ತೆ ಬೆಲೆ ಹೆಚ್ಚಿಸಿದ್ದರು.

ಜುಲೈ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿದ್ದು, ಜನರಿಗೆ ಸಮಾ ಧಾನ ತಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಮೇ 21 ರಂದು ಇಂಧನದ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಯಾಗಿತ್ತು. ಪೆಟ್ರೋಲ್ ಬೆಲೆ ಲೀಟರ್‌ಗೆ 8 ರೂಪಾಯಿ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 6 ರುಪಾಯಿ ಇಳಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರು. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62ರು.ಗೆ ಮಾರಾಟವಾಗುತ್ತಿದೆ. ಮತ್ತೊಂದೆಡೆ, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.35 ರು.ಗಳಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 97.28 ರುಪಾಯಿ ಆಗಿದೆ. ಕೋಲ್ಕತ್ತಾದಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರು ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.76 ರು ಆಗಿದ್ದರೆ, ಚೆನ್ನೈನಲ್ಲಿ ಪೆಟ್ರೋಲ್‌ಗೆ 102.63 ರು. ಮತ್ತು ಡೀಸೆಲ್‌ಗೆ 94.24 ರು. ಬೆಲೆ ಇದೆ.