Thursday, 12th December 2024

ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 21 ರೂ. ಹೆಚ್ಚಳ

ನವದೆಹಲಿ: ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಹೆಚ್ಚಿಸಿದ್ದು, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.

ತೈಲ ಕಂಪನಿಗಳು ಪ್ರತಿ ಸಿಲಿಂಡರ್‌ಗೆ 21 ರೂಪಾಯಿ ಹೆಚ್ಚಿಸಿವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ಹೊಸ ಬೆಲೆ 1,796.50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಪ್ರತಿ ಸಿಲಿಂಡರ್‌ಗೆ 1,775.50 ರೂ.ಗೆ ಇತ್ತು.

ಮುಂಬೈನಲ್ಲಿ ಈ ಹಿಂದೆ 1,728 ಇದ್ದ ಹೊಸ ದರ 1,749 ರೂ.ಗೆ ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ ಹೊಸ ದರಗಳು 1,908 ರೂ.ಇದೆ. ಇದಕ್ಕೂ ಮೊದಲು 1,885.50 ರೂಪಾಯಿ ಇತ್ತು. ಚೆನ್ನೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ 1,968.50 ರೂ ಆಗಿದೆ, ಈ ಮೊದಲು 1942 ರೂ.ಗೆ ಮಾರಾಟ ವಾಗುತ್ತಿತ್ತು.

ತೈಲ ಕಂಪನಿಗಳು 14 ಕೆ.ಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ ಗೃಹಬಳಕೆ​ ಗ್ಯಾಸ್​ ಸಿಲಿಂಡರ್​ ಬೆಲೆ 903 ರೂ. ಇದ್ದರೆ, ಕೋಲ್ಕತ್ತಾದಲ್ಲಿ 929 ರೂ., ಮುಂಬೈನಲ್ಲಿ 902 ರೂ. ಮತ್ತು ಚೆನ್ನೈನಲ್ಲಿ 918.50 ರೂಪಾಯಿಗೆ ಮಾರಾಟವಾಗುತ್ತಿದೆ.

ಸಬ್ಸಿಡಿ 300 ರೂ.ಗೆ ಹೆಚ್ಚಳ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಎಲ್​ಪಿಜಿ ಸಿಲಿಂಡರ್​ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಅಕ್ಬೋಬರ್​ನಲ್ಲಿ ಹೆಚ್ಚಿಸಿತ್ತು. ಪ್ರಸ್ತುತ 200 ರೂಪಾಯಿ ಇದ್ದ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಿಸಲಾಗಿದೆ. 14.2 ಕೆಜಿಯ ಸಿಲಿಂಡರ್​ ಬೆಲೆ ಮಾರುಕಟ್ಟೆಯಲ್ಲಿ 903 ರೂಪಾಯಿ ಇದೆ. ಸದ್ಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿಯೊಂದಿಗೆ 703 ರೂಪಾಯಿಗೆ ಲಭ್ಯವಾಗುತ್ತಿದೆ.