ನವದೆಹಲಿ: ಬ್ರಿಟಿಷರ ದಾಸ್ಯದಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಮುಂದಿನ ವರ್ಷ 2022ಕ್ಕೆ 75 ವರ್ಷವಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಸಮಿತಿ ರಚಿಸಿದ್ದು, ಇದರ ಸದಸ್ಯರಾಗಿ ಕೇಂದ್ರ ಸಚಿವರು, ಮುಖ್ಯ ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಕಲಾವಿದರು ಸೇರಿ 259 ಮಂದಿ ಈ ಸಮಿತಿಯ ಭಾಗವಾಗಿರಲಿದ್ದಾರೆ.
ಕೇಂದ್ರ ಸಚಿವರುಗಳಾದ ಅಮಿತ್ ಶಾ, ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಎಸ್ ಜೈಶಂಕರ್ ಮತ್ತು ಪ್ರಕಾಶ್ ಜಾವಡೇಕರ್ ಸೇರಿದಂತೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಿಜೆಐ ಎಸ್ ಎ ಬೊಬ್ಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಎಚ್ ಡಿ ದೇವೇಗೌಡ, ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಪ್ರತಿಪಕ್ಷ ನಾಯಕರಾದ ಸೋನಿಯಾ ಗಾಂಧಿ ಮತ್ತು ಸೀತಾರಾಮ್ ಯೆಚೂರಿ ಕೂಡ ಸೇರಿದ್ದಾರೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಕೂಡ ಸಮಿತಿ ಭಾಗವಾಗಿದ್ದಾರೆ.
ಪ್ರಮುಖ ಗಣ್ಯರೆಂದರೆ, ಕಲಾವಿದರಾದ ಲತಾ ಮಂಗೇಶ್ಕರ್, ಅಮಿತಾಬ್ ಬಚನ್, ರಜನಿಕಾಂತ್, ಎ.ಆರ್. ರಹಮಾನ್, ಅನುಪಮ್ ಖೇರ್, ಹೇಮಾ ಮಾಲಿನಿ, ಪ್ರೊಸೆನ್ಜಿತ್ ಚಟರ್ಜಿ, ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ಪಿ.ಟಿ.ಉಷಾ, ಮೇರಿ ಕೋಮ್, ಆಧ್ಯಾತ್ಮಿಕ ನಾಯಕರು, ಚಲನಚಿತ್ರ ನಿರ್ದೇಶಕರು, ಮತ್ತು ರತನ್ ಟಾಟಾ, ನಂದನ್ ನಿಲೇಕಣಿ ಮೊದಲಾದವರಿದ್ದಾರೆ.