Friday, 22nd November 2024

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ನಾಯಕರಿಂದ ಸೈಕಲ್‌ ರ‍್ಯಾಲಿ

ಮುಂಬೈ: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನ‌ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ವಿಧಾನ ಭವನದ ಮುಂದೆ ಸೋಮವಾರ ಸೈಕಲ್‌ ರ‍್ಯಾಲಿ ನಡೆಸಿದರು.

ಮಹಾರಾಷ್ಟ್ರ ವಿಧಾನಸಭೆಯ ‌ಬಜೆಟ್‌ ಅಧಿವೇಶನ ಸೋಮವಾರ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಚಿವರಾದ ಬಾಳಸಾಹೇಬ್‌ ಥೋರಟ್‌, ಅಸ್ಲಂ ಶೇಖ್, ಯಶೋಮತಿ ಠಾಕೂರ್ ಮತ್ತು ಮುಂಬೈನ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಅಲಿಯಾಸ್ ಭಾಯ್ ಜಗ್ತಾಪ್ ಅವರು ಬಜೆಟ್‌ ಅಧಿವೇಶನ ಆರಂಭಕ್ಕೂ ಮುನ್ನ ಸೈಕಲ್‌ ರ‍್ಯಾಲಿಯಲ್ಲಿ ಭಾಗವಹಿಸಿ ದ್ದರು.

ನಾನಾ ಪಟೋಲೆ ಅವರು,’ ಕೇಂದ್ರ ಸರ್ಕಾರವು ಇಂಧನ ಬೆಲೆ ಏರಿಕೆ ಮೂಲಕ ಜನರ ಬಾಯಿಯಿಂದ ಆಹಾರವನ್ನು ಕಸಿದು ಕೊಳ್ಳುತ್ತಿದೆ. ಈ ಮೂಲಕ ಕೇಂದ್ರ ‘ಪಾಪ’ ಮಾಡುತ್ತಿದೆ’ ಎಂದು ದೂರಿದರು.

‘ಚಳಿಗಾಲದಲ್ಲಿ ಇಂಧನದ ಬೆಲೆ ಕಡಿಮೆಯಾಗುತ್ತದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಜನರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

‘ಕಾಂಗ್ರೆಸ್‌ ನಾಯಕರು ಇಂಧನ ಬೆಲೆ ಏರಿಕೆ ಖಂಡಿಸಿ ಸಚಿವಾಲದಿಂದ ವಿಧಾನ ಭವನದ ತನಕ ಸೈಕಲ್‌ ರ‍್ಯಾಲಿ ನಡೆಸಿದರು ಅವರು ತಿಳಿಸಿದರು.