Sunday, 13th October 2024

ಕಾಂಗ್ರೆಸ್‌ನ ಮೂವರು ನಾಯಕರ ಟ್ವಿಟ್ಟರ್ ಖಾತೆ ಲಾಕ್‌

ನವದೆಹಲಿ: ಅತ್ಯಾಚಾರಕ್ಕೊಳಗಾಗಿ ನಂತರ ಕೊಲೆಗೀಡಾದ ನಂಗಲ್ ದಲಿತ ಬಾಲಕಿಯ ಹೆತ್ತವರನ್ನು ಭೇಟಿಯಾದ ಫೋಟೋ ಟ್ವೀಟ್ ಮಾಡಿದ್ದಕ್ಕಾಗಿ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ ಬೆನ್ನಲ್ಲೇ ಮೂವರು ಹಿರಿಯ ಪಕ್ಷ ನಾಯಕರುಗಳ ಟ್ವಿಟ್ಟರ್ ಖಾತೆಗಳನ್ನೂ ಲಾಕ್ ಮಾಡಲಾಗಿರುವ ಬಗ್ಗೆ ಪಕ್ಷ ಆಕ್ರೋಶ ಹೊರಹಾಕಿದೆ.

ರಣದೀಪ್ ಸಿಂಗ್ ಸುರ್ಜೇವಾಲ, ಅಜಯ್ ಮಾಕೆನ್ ಹಾಗೂ ಸುಷ್ಮಿತಾ ದೇವ್ ಅವರ ಖಾತೆ ಲಾಕ್‌ ಆಗಿದೆ. ಇಲ್ಲಿಯ ತನಕ ರಾಹುಲ್ ಹೊರತಾಗಿ ಒಟ್ಟು ಐದು ನಾಯಕರ ಟ್ವಿಟ್ಟರ್ ಖಾತೆ ಗಳು ಲಾಕ್ ಆಗಿವೆ.

ಸುರ್ಜೇವಾಲ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದರೆ, ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ಅವರು ರಾಜಸ್ಥಾನ ವ್ಯವಹಾರಗಳ ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸುಷ್ಮಿತಾ ದೇವ್ ಅವರು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ.

ಕಾಂಗ್ರೆಸ್ ಈ ಕ್ರಮವನ್ನು ಖಂಡಿಸುತ್ತದೆ ಹಾಗೂ ತಪ್ಪಾಗಿ ಲಾಕ್ ಮಾಡಲ್ಪಟ್ಟ ಎಲ್ಲರಿಗಾಗಿ ಹೋರಾಟ ಮುಂದುವರಿಸಲಿದೆ ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಪ್ರಣವ್ ಝಾ ಬರೆದು ಪ್ರಧಾನಿ, ಟ್ವಿಟ್ಟರ್ ಸಿಇಒ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.