Sunday, 15th December 2024

Mallikarjun Kharge : ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಮಲ್ಲಿಕಾರ್ಜುನ ಖರ್ಗೆ

Mallikarjun Kharge

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ಘಟನೆ ನಡೆದಿದೆ. ಕಥುವಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಈ ಘಟನೆ ನಡೆದಿದೆ. ಖರ್ಗೆ ಅವರ ಸ್ಥಿತಿಯನ್ನು ನೋಡಿದ ವೇದಿಕೆಯಲ್ಲಿದ್ದ ಹಲವಾರು ನಾಯಕರು ಅವರಿಗೆ ನೆರವಾದರು.

ಅನಾರೋಗ್ಯದ ಹೊರತಾಗಿಯೂ ಖರ್ಗೆ ತಮ್ಮ ಭಾಷಣ ಮುಂದುವರಿಸಿದರು. ನಾವು ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು, ನಾನು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ನಾನು ಜೀವಂತವಾಗಿರುತ್ತೇನೆ ಎಂದು ಹೇಳಿದರು.

ಕಥುವಾದ ಜಸ್ರೋಟಾದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಜನರು (ಕೇಂದ್ರ ಸರ್ಕಾರ) ಎಂದಿಗೂ ಚುನಾವಣೆಗಳನ್ನು ನಡೆಸಲು ಬಯಸಲಿಲ್ಲ. ಅವರು ಬಯಸಿದ್ದರೆ ಒಂದೆರಡು ವರ್ಷಗಳಲ್ಲಿ ಮಾಡುತ್ತಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಪ್ರಾರಂಭಿಸಿದ್ದಾರೆ. ಚುನಾವಣೆ ಬೇಕಿರಲಿಲ್ಲ. ಅವರು ಲೆಫ್ಟಿನೆಂಟ್ ಗವರ್ನರ್ ಮೂಲಕ ರಿಮೋಟ್ ಕಂಟ್ರೋಲ್ ಸರ್ಕಾರವನ್ನು ನಿರ್ವಹಿಸಲು ಬಯಸಿದ್ದರು ಎಂದು ದೂರಿದರು.

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದ ಯುವಕರಿಗೆ ಏನನ್ನೂ ನೀಡಿಲ್ಲ. 10 ವರ್ಷಗಳಲ್ಲಿ ನಿಮ್ಮ ಸಮೃದ್ಧಿಯನ್ನು ಮರಳಿ ತರಲು ಸಾಧ್ಯವಾಗದ ವ್ಯಕ್ತಿಯನ್ನು ನೀವು ನಂಬಬಾರದು. ಬಿಜೆಪಿ ನಾಯಕರು ನಿಮ್ಮ ಮುಂದೆ ಬಂದರೆ, ಅವರು ಒಳಿತು ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂದು ಅವರನ್ನು ಕೇಳಿ ನೋಡಿ ಎಂದು ಹೇಳಿದರು.

ಇದನ್ನೂ ಓದಿ: Pralhad Joshi: ಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಐಪಿಎಸ್‌ ಅಧಿಕಾರಿ ವಿರುದ್ಧ ಪ್ರಲ್ಹಾದ ಜೋಶಿ ಗರಂ; ಕ್ಷಮಾಪಣೆ ಕೇಳಲು ಸೂಚನೆ

2019 ರ ಆಗಸ್ಟ್‌ನಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಾಗಿದೆ ಎಂಬುದು ಗಮನಾರ್ಹ. ಇಂದು, ಭಾನುವಾರ, ಮೂರನೇ ಮತ್ತು ಅಂತಿಮ ಹಂತದ ಮತದಾನಕ್ಕೆ ಮುಂಚಿತವಾಗಿ ಪ್ರಚಾರದ ಕೊನೆಯ ದಿನವಾಗಿದೆ. ಅಕ್ಟೋಬರ್ 3 ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.