ರಾಹುಲ್ ಮಂಗಳವಾರವೂ ವಿಚಾರಣೆಗೆ ಹಾಜರಾಗಿದ್ದಾರೆ. ಇ.ಡಿ. ಅಧಿಕಾರಿ ಗಳು ಸೋಮವಾರ ಹತ್ತು ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆಸಿದ್ದರು.
ರಣದೀಪ್ ಸುರ್ಜೇವಾಲಾ, ಲೋಕಸಭೆ ಸಂಸದ ಮಾಣಿಕಂ ಟಾಗೋರ್, ಪಿ.ಎಲ್.ಪೂನಿಯಾ ಸೇರಿದಂತೆ ಹಲವರನ್ನು ಪಕ್ಷದ ಪ್ರಧಾನ ಕಚೇರಿ ಎದುರು ವಶಕ್ಕೆ ಪಡೆಯಲಾಗಿದೆ.
ಟಾಗೋರ್, ‘ಪೊಲೀಸರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಅಮಿತ್ ಶಾ ಅವರ ಶಕ್ತಿ ನಮ್ಮನ್ನು ತಡೆಯಲಾಗದು’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಲು ಹೊರಟ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ತಮಿಳುನಾಡಿನ ಸಂಸದರನ್ನು ದೆಹಲಿಯ ನರೇಲಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಹೊರಟ ಈ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದರು.
ಈ ವೇಳೆ ವಾಗ್ವಾದ ನಡೆಯಿತು ಹಾಗೂ ಪೊಲೀಸರ ಧೋರಣೆಯನ್ನು ಸುರೇಶ್ ಪ್ರಶ್ನಿಸಿದರು. ಪೊಲೀಸರೊಬ್ಬರು ಸುರೇಶ್ ಅವರನ್ನು ಹಿಂಬದಿಯಿಂದ ತಳ್ಳಿದರು. ಬಳಿಕ ಬಸ್ಸಿನಲ್ಲಿ ಕರೆದುಕೊಂಡು ಹೋದರು.