Saturday, 23rd November 2024

ವರ್ಚ್ಯುವಲ್​ ವಿಚಾರಣೆ ವೇಳೆ ಕೂಲ್‌ಡ್ರಿಂಕ್ಸ್‌ ಕುಡಿದ ತಪ್ಪಿಗೆ ಈ ಶಿಕ್ಷೆ….!

ಅಹಮದಾಬಾದ್‌: ವರ್ಚ್ಯುವಲ್​ ವಿಚಾರಣೆ ವೇಳೆ ಪೊಲೀಸರೊಬ್ಬರು ಕೂಲ್‌ಡ್ರಿಂಕ್ಸ್‌ ಕುಡಿದಿದ್ದನ್ನು ಅಶಿಸ್ತು ಎಂದು ಪರಿಗಣಿಸಿದ ನ್ಯಾಯಮೂರ್ತಿಗಳು ಅಚ್ಚರಿಯ ಶಿಕ್ಷೆ ನೀಡಿದ್ದಾರೆ. ಅದೇನೆಂದರೆ 100 ಕ್ಯಾನ್​​ಗಳಷ್ಟು ತಂಪು ಪಾನೀಯ ವಿತರಿಸಿ ಎಂದು ಹೇಳಿದ್ದಾರೆ.

ವಿಚಾರಣೆಗೆ ಹಾಜರು ಇದ್ದ ವಕೀಲರು, ಪೊಲೀಸರು ವಿಚಾರಣೆ ಆಲಿಸುತ್ತಿದ್ದರು. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಬಾಯಾರಿಕೆ ಆಯಿತೆಂದು ಒಂದೆರಡು ಗುಟುಕು ತಂಪು ಪಾನೀಯ ಸೇವಿಸಿದರು. ಇದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್​ ಅವರ ಗಮನಕ್ಕೆ ಬಂದು, ವಿಚಾರಣೆ ವೇಳೆ ಇಂಥ ಕ್ರಮವು ಅಶಿಸ್ತು ಎಂದು ಭಾವಿಸಿ, ಕುತೂಹಲ ಎನ್ನಿಸುವಂಥ ಶಿಕ್ಷೆಯನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ.

ನೀವು, ನಮ್ಮ ಕೋರ್ಟ್​ನ ವಕೀಲರಿಗೆ (ಬಾರ್​ ಅಸೋಸಿಯೇಶನ್​ ಸಿಬ್ಬಂದಿ) 100 ಕ್ಯಾನ್​​ಗಳಷ್ಟು ತಂಪು ಪಾನೀಯ ವಿತರಿಸಿ ಎಂದು ಹೇಳಿದ್ದಾರೆ. ನೀವು ವಿಚಾರಣೆ ಮಧ್ಯೆ ತಂಪು ಪಾನೀಯದಂತೆ ಕಾಣುವ ಏನನ್ನೋ ಸೇವಿಸಿದ್ದೀರಿ. ಹೀಗಾಗಿ ಒಂದೋ ಶಿಸ್ತು ಕ್ರಮ ಎದುರಿಸಬೇಕು ಇಲ್ಲವೇ, ನಮ್ಮ ಹೈಕೋರ್ಟ್​ನ 100 ವಕೀಲರಿಗೆ ಕೋಲ್ಡ್​ ಡ್ರಿಂಕ್​ ವಿತರಿಸಬೇಕು ಎಂದು ಹೇಳಿದರು.

ಸ್ವಲ್ಪ ದಿನಗಳ ಹಿಂದೆ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸಾ ತಿಂದಿದ್ದರು. ಆಗ ಒಂದೋ ಎಲ್ಲರಿಗೂ ಕೊಟ್ಟು ತಿನ್ನಬೇಕು ಇಲ್ಲವೇ ನೀವೂ ತಿನ್ನಬಾರದು ಎಂದು ಹೇಳಿದ್ದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಈಗ ತಂಪು ಪಾನೀಯ ಕುಡಿದ ಪೊಲೀಸ್ ಅಧಿಕಾರಿ ಎ.ಎಂ.ರಾಥೋಡ್​​ಗೂ ಅದನ್ನೇ ಹೇಳಿದ್ದಾರೆ.

ಟ್ರಾಫಿಕ್​ ಜಂಕ್ಷನ್​​ನಲ್ಲಿ ಪೊಲೀಸ್​ ಅಧಿಕಾರಿ ಎ.ಎಂ.ರಾಥೋಡ್​ ಮತ್ತು ಇತರ ಪೊಲೀಸ್ ಅಧಿಕಾರಿಗಳು ಇಬ್ಬರು ಮಹಿಳೆಯರಿಗೆ ಥಳಿಸಿದ್ದಾರೆ ಎಂಬ ಆರೋಪ ಅರ್ಜಿಗೆ ಸಂಬಂಧಪಟ್ಟಂತೆ ಇವರು ಕೋರ್ಟ್​​ನ ವರ್ಚ್ಯುವಲ್​ ವಿಚಾರಣೆಗೆ ಹಾಜರಾಗಿದ್ದರು.