ನೋಯ್ಡಾ: ಔಷಧ ಕಂಪನಿ ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಕೆಮ್ಮಿನ ಸಿರಪ್ ಉತ್ಪಾದನೆಯನ್ನು ಸ್ಥಗಿತ ಗೊಳಿಸಿದೆ.
‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಉತ್ಪಾದಿಸಿದ ‘ಡಾಕ್ 1 ಮ್ಯಾಕ್ಸ್’ ಸೇವನೆ ಬಳಿಕ ದೇಶದಲ್ಲಿ ಕನಿಷ್ಠ 18 ಮಕ್ಕಳು ಮೃತಪಟ್ಟಿರುವುದಾಗಿ ಉಜ್ಬೇಕಿಸ್ತಾನ ಸರ್ಕಾರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ಔಷಧ ತಯಾರಿಕೆಯನ್ನು ನಿಲ್ಲಿಸಿದೆ.
ಸಂಸ್ಥೆಯ ನೊಯಿಡಾ ಘಟಕವನ್ನು ಉತ್ತರ ಪ್ರದೇಶ ಔಷಧ ನಿಯಂತ್ರಣ ಇಲಾಖೆ ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (ಸಿಡಿಎಸ್‌ಸಿಒ) ತಂಡಗಳು ಪರಿಶೀಲನೆ ನಡೆಸಿವೆ.
‘ಉಜ್ಬೇಕಿಸ್ತಾನದ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಔಷಧ ಕಂಪನಿಯ ನೊಯಿಡಾ ಘಟಕವನ್ನು ಉತ್ತರ ಪ್ರದೇಶದ ಔಷಧ ನಿಯಂತ್ರಕರು ಮತ್ತು ಸಿಡಿಎಸ್‌ಸಿಒ ತಂಡಗಳು ಪರಿಶೀಲಿಸಿವೆ. ವರದಿ ಬಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಉತ್ಪಾದನಾ ಘಟಕದಿಂದ ಸಂಗ್ರಹಿಸಲಾಗಿದೆ. ಅವುಗಳನ್ನು ಪರೀಕ್ಷೆಗಾಗಿ ಚಂಡೀಗಢದ ಪ್ರಾದೇಶಿಕ ಔಷಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Read E-Paper click here