Saturday, 14th December 2024

Love Jihad: ʼಲವ್‌ ಜಿಹಾದ್‌ ದೇಶದ ಐಕ್ಯತೆಗೆ ದೊಡ್ಡ ಆತಂಕʼ ಎಂದ ನ್ಯಾಯಾಲಯ; ಅಪರಾಧಿಗೆ ಜೀವಾವಧಿ ಶಿಕ್ಷೆ

love jihad

ಬರೇಲಿ: ಲವ್‌ ಜಿಹಾದ್‌ (Love Jihad) ದೇಶದ ಐಕ್ಯತೆಗೆ (unity) ದೊಡ್ಡ ಆತಂಕ ಸೃಷ್ಟಿಸಿದೆ. ಹಿಂದೂ ಹೆಣ್ಣುಮಕ್ಕಳಿಗೆ ಪ್ರೀತಿಯ ಆಮಿಷವೊಡ್ಡಿ ಅಕ್ರಮ ಮತಾಂತರ (conversion) ಮಾಡಲಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಹೇಳಿದ್ದು, ಈ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಜೈಲು (life Sentence) ಶಿಕ್ಷೆ ವಿಧಿಸಿದ್ದಾರೆ.

ಜನಾಂಗೀಯ ಸಮರ ಮತ್ತು ಅಂತಾರಾಷ್ಟ್ರೀಯ ಪಿತೂರಿಯ ಮೂಲಕ ನಿರ್ದಿಷ್ಟ ಧರ್ಮದ ಕೆಲವು ಸಮಾಜ ವಿರೋಧಿ ಶಕ್ತಿಗಳು ಭಾರತದ ವಿರುದ್ಧ ಪ್ರಾಬಲ್ಯ ಸ್ಥಾಪಿಸುವುದು ಲವ್ ಜಿಹಾದ್‌ನ ಉದ್ದೇಶವಾಗಿದೆ. ಹಿಂದೂ ಹೆಣ್ಣುಮಕ್ಕಳಿಗೆ ಪ್ರೀತಿಯ ಆಮಿಷವೊಡ್ಡಿ ಅಕ್ರಮ ಮತಾಂತರ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಫಾಸ್ಟ್ ಟ್ರ್ಯಾಕ್ ಕೋರ್ಟ್) ರವಿಕುಮಾರ್ ದಿವಾಕರ್ ಹೇಳಿದ್ದಾರೆ.

ಭಾರತದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವಂತಹ ಪರಿಸ್ಥಿತಿಗಳನ್ನು ಸೃಷ್ಟಿಸಲಾಗುತ್ತಿದೆ. ಅಕ್ರಮ ಮತಾಂತರಗಳು ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ ಎಂದು ದಿವಾಕರ್ ನುಡಿದರು. ಸುಳ್ಳು ಗುರುತು, ವೈವಾಹಿಕ ಸಂಬಂಧ ಮತ್ತು ಗರ್ಭಪಾತದ ಪ್ರಕರಣದ ವಿಚಾರಣೆಯನ್ನು ಅವರು ನಡೆಸಿ ಹೀಗೆ ಅಭಿಪ್ರಾಯ ತಿಳಿಸಿದ್ದಾರೆ.

25 ವರ್ಷದ ಮೊಹಮ್ಮದ್ ಅಲಿಮ್‌ಗೆ ಎಂಬಾತನಿಗೆ ಪ್ರಕರಣದಲ್ಲಿ ಅವರು ಜೀವಾವಧಿ ಶಿಕ್ಷೆ ವಿಧಿಸಿದರು. ತನ್ನ ಬಗ್ಗೆ ಸುಳ್ಳು ಗುರುತನ್ನು ನೀಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಬೆದರಿಕೆ ಹಾಕಿದ ಪ್ರಕರಣ ಈತನ ಮೇಲಿತ್ತು. ಅಪರಾಧಗಳಲ್ಲಿ ಆರೋಪಿಗೆ ಸಹಾಯ ಮಾಡಿದ್ದಕ್ಕಾಗಿ ಅವನ 65 ವರ್ಷದ ತಂದೆಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಬರೇಲಿಯಲ್ಲಿ ಕಂಪ್ಯೂಟರ್ ಕೋರ್ಸ್ ಓದುತ್ತಿದ್ದ 20 ವರ್ಷದ ಯುವತಿ ಈ ಪ್ರಕರಣದ ದೂರುದಾರರು. ದೇವರ್ನಿಯಾ ಪ್ರದೇಶದ ಜದೌನ್‌ಪುರ ಗ್ರಾಮದವನಾದ ಅಲಿಂ, ‘ಆನಂದ್’ ಎಂಬ ಸುಳ್ಳು ಹೆಸರಿನಿಂದ ಪರಿಚಯಿಸಿಕೊಂಡು ಮಹಿಳೆಯನ್ನು ವಂಚಿಸಿದ್ದ.

ಇಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪರಿಸ್ಥಿತಿಗಳನ್ನು ಸೃಷ್ಟಿಸುವ ಸಂಚು ನಡೆಯುತ್ತಿದೆ. ಮಾನಸಿಕ ಒತ್ತಡ, ಮದುವೆ ಮತ್ತು ಉದ್ಯೋಗದಂತಹ ಪ್ರಚೋದನೆಗಳ ಮೂಲಕ ಮತಾಂತರಗಳನ್ನು ನಡೆಸಲಾಗುತ್ತಿದೆ ಎಂದು ನ್ಯಾಯಾಲಯವು ಹೇಳಿದೆ. ಸಂಭಾವ್ಯ ವಿದೇಶಿ ಹಣಕಾಸು ನೆರವಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ತೀರ್ಪಿನ ಪ್ರತಿಗಳನ್ನು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಸಮಸ್ಯೆಯನ್ನು ತಕ್ಕ ಸಮಯದಲ್ಲಿ ಪರಿಹರಿಸದಿದ್ದರೆ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಗಮನಿಸಿದೆ.

“ಲವ್ ಜಿಹಾದ್” ಮೂಲಕ ಕಾನೂನುಬಾಹಿರ ಮತಾಂತರಗಳನ್ನು ಎದುರಿಸಲು ಉತ್ತರ ಪ್ರದೇಶ ಸರ್ಕಾರವು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆ- 2021 ಅನ್ನು ಜಾರಿಗೊಳಿಸಿದೆ ಎಂದು ನ್ಯಾಯಾಲಯ ಗಮನಸೆಳೆದಿದೆ. “ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಅವರ ಧರ್ಮವನ್ನು ಆಚರಿಸಲು ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕನ್ನು ನೀಡುತ್ತದೆ. ಆದರೆ ‘ಲವ್ ಜಿಹಾದ್’ ಮೂಲಕ ಕಾನೂನುಬಾಹಿರ ಮತಾಂತರಗಳ ಮೂಲಕ ಈ ವೈಯಕ್ತಿಕ ಸ್ವಾತಂತ್ರ್ಯವನ್ನು ಆಚರಿಸಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.

ಇದನ್ನೂ ಓದಿ: ಲವ್‌ ಜಿಹಾದ್‌ನ ನರಕ ದರ್ಶನ ಕೇರಳ ಫೈಲ್ಸ್