ಜಬಲ್ಪುರ: ಶ್ರೀ ರಾಮ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಹಿಂದೂ ಧರ್ಮದ ವಿರುದ್ಧ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಅಪ್ಲೋಡ್ ಮಾಡಿದ ಆರೋಪದ ಮೇಲೆ ತನ್ನ ವಿರುದ್ಧದ ಹಾಕಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ (Court News) ವಜಾಗೊಳಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294, 153 ಎ, 295 ಎ ಮತ್ತು ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3 (1) ಮತ್ತು 3 (2) ಅಡಿಯಲ್ಲಿ ತನ್ನ ವಿರುದ್ಧ ಆಗಸ್ಟ್ 17, 2023 ರಂದು ಸತ್ನಾದ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಮೊಹಮ್ಮದ್ ಬಿಲಾಲ್ ಅರ್ಜಿ ಸಲ್ಲಿಸಿದ್ದರು.
ಎರಡು ದಿನಗಳ ಹಿಂದೆ ಕೆಲವು ವ್ಯಕ್ತಿಗಳು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಬಿಲಾಲ್ ತನ್ನ ಮನವಿಯಲ್ಲಿ ಹೇಳಿದ್ದರು.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಯಾಕೆ ಅಪ್ಲೋಡ್ ಮಾಡಲಾಗಿದೆ ಎಂದು ದೂರುದಾರರು ವಿಚಾರಿಸಿದ್ದಾರೆ. ಈ ವೇಳೆ ಪೋಸ್ಟ್ ಅನ್ನು ಹ್ಯಾಕ್ ಮಾಡುವ ಮೂಲಕ ಅಪ್ಲೋಡ್ ಮಾಡಿದ್ದಾರೆ ಎಂದು ವಿವರಿಸುವ ಬದಲು, ಬಿಲಾಲ್ ದೂರುದಾರರನ್ನು ನಿಂದಿಸಲು ಮತ್ತು ಅವಮಾನಿಸಲು ಪ್ರಾರಂಭಿಸಿದ್ದರು. ಅಲ್ಲದೆ ಅವರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ ” ಎಂದು ನ್ಯಾಯಮೂರ್ತಿ ಜಿಎಸ್ ಅಹ್ಲುವಾಲಿಯಾ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಹೇಳಿದೆ.
ಅರ್ಜಿದಾರರ ಈ ನಡವಳಿಕೆಯು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಬೇರೊಬ್ಬರು ಅಪ್ಲೋಡ್ ಮಾಡಿದ್ದಾರೆ ಎಂಬ ಸಮರ್ಥನೆಗೆ ಪೂರಕವಾಗಿಲ್ಲ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಅಪ್ಲೋಡ್ ಆಗಿರುವುದನ್ನು ಅರ್ಜಿದಾರರು ಒಪ್ಪಿಕೊಂಡಿರುವುದರಿಂದ ಅವರಿಗೆ ಎಫ್‌ಐಆರ್ ರದ್ದು ಮಾಡಲು ಕೋರುವ ಅವಕಾಶ ಇಲ್ಲ ” ಎಂದು ಹೈಕೋರ್ಟ್ ಕಳೆದ ತಿಂಗಳ ತನ್ನ ಆದೇಶದಲ್ಲಿ ತಿಳಿಸಿತ್ತು.
ಎಫ್‌ಐಆರ್‌ನಲ್ಲಿ ಮಾಡಲಾದ ಆರೋಪಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ. ಆ ಬಗ್ಗೆ ತನಿಖೆ ನಡೆದರೆ ಮಾತ್ರ ಗೊತ್ತಾಗಲಿದೆ ಎಂದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.