Thursday, 12th December 2024

ವರ್ಷಾಂತ್ಯದ ವೇಳೆಗೆ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದನೆಯಲ್ಲಿ ಹೆಚ್ಚಳ

ನವದೆಹಲಿ: ವರ್ಷಾಂತ್ಯದ ವೇಳೆಗೆ ತಿಂಗಳಿಗೆ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು 12 ಕೋಟಿ ಹಾಗೂ ಕೋವ್ಯಾಕ್ಸಿನ್‌ ಉತ್ಪಾದನೆಯನ್ನು 5.8 ಕೋಟಿ ಡೋಸ್‌ಗಳಿಗೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಗಳವಾರ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಈ ವಿಷಯ ತಿಳಿಸಿದರು. ಲಸಿಕೆಗಳನ್ನು ತಯಾರಿಸುವ ಕಂಪನಿಗಳ ಸದ್ಯದ ಉತ್ಪಾದನಾ ಸಾಮರ್ಥ್ಯ ಹಾಗೂ ಡಿಸೆಂಬರ್‌ ವೇಳೆಗೆ ಸಾಮರ್ಥ್ಯದಲ್ಲಿ ಎಷ್ಟು ಹೆಚ್ಚಳ ಮಾಡಲಾಗುವುದು ಕುರಿತ ಪ್ರಶ್ನೆಗೆ ಉತ್ತರಿಸಿದರು.

ಕೋವಿಡ್‌-19 ಲಸಿಕೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಅಧೀನದ ಬಯೋಟೆಕ್ನಾಲಜಿ ಇಲಾಖೆಯು ‘ಮಿಷನ್‌ ಕೋವಿಡ್‌ ಸುರಕ್ಷಾ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸಾರ್ವಜನಿಕ ವಲಯದ ಉದ್ಯಮವಾದ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟನ್ಸ್‌ ಕೌನ್ಸಿಲ್‌ (ಬಿಐಆರ್‌ಎಸಿ) ಈ ಕಾರ್ಯಕ್ರಮವನ್ನು ಜಾರಿಗೊಳಿಸುವುದು ಎಂದು ಮಾಹಿತಿ ನೀಡಿದರು.

ಇನ್ನೂ ನಾಲ್ಕು ಔಷಧ ಕಂಪನಿಗಳು ಅಕ್ಟೋಬರ್‌-ನವೆಂಬರ್‌ ವೇಳೆಗೆ ಕೋವಿಡ್‌ ಲಸಿಕೆಗಳ ಉತ್ಪಾದನೆ ಆರಂಭಿ ಸುವ ನಿರೀಕ್ಷೆ ಇದೆ’ ಎಂದು ಸಚಿವರು ತಿಳಿಸಿದರು. ಲಸಿಕೆ ಉತ್ಪಾದನೆ ಹೆಚ್ಚಾಗುವುದರಿಂದ ಲಸಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ಸಿಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.