Friday, 22nd November 2024

ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಲಖನೌ ಪೀಠ

ಖನೌ: ಗೋಹತ್ಯೆ ನಿಷೇಧಿಸಲು ಮತ್ತು ಅದನ್ನು ‘ಸಂರಕ್ಷಿತ ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲು ಕೇಂದ್ರ ಸರ್ಕಾರವು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಹೇಳಿದೆ.

ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಹಿಂದೂ ಧರ್ಮದಲ್ಲಿ, ಗೋವು ದೈವಿಕ ಸ್ಥಾನ ಹೊಂದಿದೆ. ಅಲ್ಲದೇ ಪರೋಪಕಾರದ ಪ್ರಾಣಿಯಾಗಿದೆ. ಹಸು ವಿಗೂ ದೇವತೆಗಳಿಗೂ ನಿಕಟವಾದ ಸಂಬಂಧವಿದೆ. ಅದರ ನಾಲ್ಕು ಕಾಲುಗಳು ನಾಲ್ಕು ವೇದಗಳನ್ನು ಸೂಚಿಸುತ್ತದೆ. ಆದ್ದರಿಂದ, ಅದನ್ನು ರಕ್ಷಿಸಬೇಕು ಮತ್ತು ಪೂಜಿಸಬೇಕು’ ಎಂದು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಹೇಳಿದರು.

ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ- 1955 ರ ಅಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸ ಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪೊಲೀಸರು ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೆಳಹಂತದ ನ್ಯಾಯಾ ಲಯದಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರಾದ ಮೊಹಮ್ಮದ್ ಅಬ್ದುಲ್ ಖಾಲಿಕ್ ಮನವಿ ಮಾಡಿದ್ದರು.

ಅರ್ಜಿಯನ್ನು ವಜಾಗೊಳಿಸಿದ ಪೀಠ, ದಾಖಲಾದ ವಾಸ್ತವಾಂಶಗಳ ಆಧಾರದ ಮೇಲೆ ಅರ್ಜಿದಾರರ ವಿರುದ್ಧ ಪ್ರಕರಣ ಹೂಡಲಾಗಿದೆ ಎಂದು ಹೇಳಿತು.