ಹೈದರಾಬಾದ್: ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಕುರಿತ ಮಾತುಕತೆ ವಿಫಲವಾದ ನಂತರ ತೆಲಂಗಾಣ ವಿಧಾನಸಭೆಗೆ 14 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿಪಿಐ(ಎಂ) ಬಿಡುಗಡೆ ಮಾಡಿದೆ.
ಪಕ್ಷದ ರಾಜ್ಯ ಕಾರ್ಯದರ್ಶಿ ತಮ್ಮಿನೇನಿ ವೀರಭದ್ರಂ ಅವರು ಪಲೈರ್ ಕ್ಷೇತ್ರದಿಂದ ಸ್ಪರ್ಧಿಸಿದರೆ, ಮಾಜಿ ಶಾಸಕ ಜೂಲಕಾಂತಿ ರಂಗಾರೆಡ್ಡಿ ಮಿರ್ಯಾಲ ಗುಡದಿಂದ ಸ್ಪರ್ಧಿಸಲಿದ್ದಾರೆ.
ವೀರಭದ್ರಂ ಮಾತನಾಡಿ, ’17 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಪಕ್ಷವು ಈ ಮೊದಲೇ ಪ್ರಕಟಣೆ ಹೊರಡಿಸಿತ್ತು. ಇನ್ನೂ ಒಂದೆರಡು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಹೇಳಿದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3ಕ್ಕೆ ಮತ ಎಣಿಕೆ ನಡೆಯಲಿದೆ.