ವಾಷಿಂಗ್ಟನ್: ವಿಡಿಯೋ ಗೇಮ್‌ನಲ್ಲಿ ಸೋತ ಕಾರಣ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಮಗುವನ್ನು ಗೋಡೆಗೆ ಎಸೆದು (Crime News) ಕ್ರೌರ್ಯ ಮೆರೆದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇನ್ನು ಅಮೆರಿಕದ ಮಿಲ್ವಾಕೀಯಲ್ಲಿ ಈ ಘಟನೆ ನಡೆದಿದ್ದು, ಜಲಿನ್ ವೈಟ್ (20) ಎಂಬಾತ ತನ್ನ ಮಗುವನ್ನೇ ಎತ್ತಿ ಗೋಡೆಗೆ ಎಸೆದಿದ್ದಾನೆ. ಜಲಿನ್ ವೈಟ್ ವಿಡಿಯೋ ಗೇಮ್ ಆಡುತ್ತಿದ್ದಾಗ ಹತಾಶೆಯಿಂದ ತನ್ನ ಎಂಟು ತಿಂಗಳ ಮಗುವನ್ನು ಗೋಡೆಗೆ ಎಸೆದಿದ್ದು ಮಗು ಗಂಭೀರವಾಗಿ ಗಾಯಗೊಂಡಿದೆ ಎನ್ನಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಮಗುವಿಗೆ ಮಾರಣಾಂತಿಕ ಗಾಯಗಳಾಗಿವೆ. ಮಕ್ಕಳ ವಿಸ್ಕಾನ್ಸಿನ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿರುವ ಮಗು ಬದುಕುಳಿಯುವ ನಿರೀಕ್ಷೆಯಿಲ್ಲ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಮಗುವಿನ ತಲೆ ಬುರುಡೆಗೆ ಗಂಭೀರ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಅಲ್ಲದೇ ಅನೇಕ ಪಕ್ಕೆಲುಬು ಮತ್ತು ಕ್ಲಾವಿಕಲ್ ಮುರಿತವಾಗಿವೆ. ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಜಲಿನ್ ವೈಟ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಗು ಮೃತಪಟ್ಟರೆ ಇದು ಕೊಲೆ ಪ್ರಕರಣವಾಗಲಿದೆ ಎಂದು ಮಿಲ್ವಾಕೀ ಸಹಾಯಕ ಜಿಲ್ಲಾ ಅಟಾರ್ನಿ ಮೆಡೆಲಿನ್ ವಿಟ್ಟೆ ಹೇಳಿದರು.
ವಿಡಿಯೋ ಗೇಮ್ ನಲ್ಲಿ ಸೋತ ಹತಾಶೆಯಿಂದ ತಾನು ಮಗುವನ್ನು ಎಸೆದಿರುವುದಾಗಿ ವೈಟ್ ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದರು. ವೈಟ್ ನೀಡಿರುವ ಮಾಹಿತಿ ಪ್ರಕಾರ ವಿಡಿಯೋ ಗೇಮ್‌ನಲ್ಲಿ ಸೋತಾಗ ಹತಾಶೆಯಿಂದ ಮಗುವನ್ನು ಹಾಸಿಗೆಯ ಮೇಲೆ ಎಸೆದಿದ್ದು, ಮಗು ಹಾಸಿಗೆಯ ಮೇಲೆ ಸುಮಾರು ಒಂದು ಅಡಿ ಎತ್ತರದ ಗೋಡೆಗೆ ಹೊಡೆದು ಕೆಳಗೆ ಬಿದ್ದಿದೆ. ಮಗುವಿನ ತಾಯಿ ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾನೆ.
Mangalore News: ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ಸಾವು
ಜಲಿನ್ ವೈಟ್ ವಿರುದ್ಧ ಆರೋಪ ಸಾಬೀತಾದರೆ ಆತನಿಗೆ 62 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಮಗು ಸಾವನ್ನಪ್ಪಿದರೆ ಶಿಕ್ಷೆ ಇನ್ನೂ ಹೆಚ್ಚಾಗಬಹುದು ಎಂದು ವಕೀಲರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ವೈಟ್‌ಗೆ ಜಾಮೀನು ಪಡೆಯಬೇಕಾದರೆ 1,00,000 ಡಾಲರ್ ನಗದು ಪಾವತಿಸಬೇಕು. ಅಧಿಕಾರಿಗಳು ಮಗುವಿನ ಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎನ್ನಲಾಗಿದೆ.