ಶಿಮ್ಲಾ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾಂಗ್ರೆಸ್‌ನ 6 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿ ಸಭಾಧ್ಯಕ್ಷ ಕುಲದೀಪ್ ಸಿಂಗ್ ಪಠಾನಿಯಾ ಆದೇಶ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಸಚಿವ ಹರ್ಷ ವರ್ಧನ ಚೌಹಾಣ್ ಪಕ್ಷಾಂತರ ಕಾಯ್ದೆ ಅಡಿಯಲ್ಲಿ 6 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಸ್ಪೀಕರ್ಗೆ ಅರ್ಜಿ ಸಲ್ಲಿಸಿದ್ದರು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸುಖ್ವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಗುರುವಾರ ಶಿಮ್ಲಾದಲ್ಲಿ ಸಿಎಂ ಶಾಸಕರ ಸಭೆ ನಡೆಸಿದ್ದು 40ರಲ್ಲಿ 32 ಶಾಸಕರು ಸಭೆಗೆ ಹಾಜರಾಗಿದ್ದರು. ಈ ಸಭೆ ಬಳಿಕ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಆದೇಶ ಹೊರಬಿದ್ದಿದೆ.
ಅಡ್ಡ ಮತದಾನ ಹಾಗೂ ಶಾಸಕರ ಬಂಡಾಯ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಭೂಪಿಂದರ್ ಸಿಂಗ್ ಹೂಡಾ ಮಾಹಿತಿ ಸಂಗ್ರಹಿಸಲು ಹಿಮಾಚಲ ಪ್ರದೇಶದಲ್ಲಿ ಬೀಡುಬಿಟ್ಟಿದ್ದಾರೆ. ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ. ನಾವು 5 ವರ್ಷ ಸರ್ಕಾರ ನಡೆಸುತ್ತೇವೆ ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿಎಂ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.