Saturday, 14th December 2024

ಕೋಬ್ರಾ ಕಮಾಂಡೋ ಘಟಕಕ್ಕೆ ಸಿಆರ್ ಪಿಎಫ್ ಮಹಿಳಾ ತಂಡ ಸೇರ್ಪಡೆ

ಗುರಂಗಾವ್: ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿಯನ್ನೊಳಗೊಂಡ ತಂಡ ಕೋಬ್ರಾ ಕಮಾಂಡೋ ಘಟಕವನ್ನು ಶನಿವಾರ ಸೇರ್ಪಡೆಗೊಂಡಿದೆ. ಈ ತಂಡವನ್ನು ಶೀಘ್ರದಲ್ಲಿಯೇ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ.

ಇಲ್ಲಿಯವರೆಗೂ ಈ ವ್ಯವಹಾರವನ್ನು ಪುರುಷರೇ ನೋಡಿಕೊಳ್ಳುತ್ತಿದ್ದರು. ಕೋಬ್ರಾ ತಂಡದಲ್ಲಿನ ಬಹುತೇಕ ಕಮಾಂಡೋಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ. ಕೆಲವು ತಂಡಗಳನ್ನು ತುರ್ತು ಪರಿಸ್ಥಿತಿಯ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತದೆ.

ಕಾದರ್ ಪುರ ಗ್ರಾಮದ ಸಿಆರ್ ಪಿಎಫ್ ಕ್ಯಾಂಪಿನಲ್ಲಿ ಸಿಆರ್ ಪಿಎಫ್ ನಿರ್ದೇಶಕ ಜನರಲ್ ಎ. ಪಿ. ಮಹೇಶ್ವರಿ ಸಮ್ಮುಖದಲ್ಲಿ ನಡೆದ ರೈಸಿಂಗ್ ಡೇ ಸಮಾರಂಭದಲ್ಲಿ ಆಯ್ದ ಮಹಿಳೆಯರು ಪ್ರದರ್ಶನ ಮೈನವಿರೇಳಿಸಿತು. ಲಿಂಗತ್ವ ಆಧಾರದಲ್ಲಿನ ನಂಬಿಕೆ ಗಳು, ವರ್ಗಿಕರಣಗಳನ್ನು ಸುಳ್ಳು ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖವಾಗಿವೆ ಎಂದು ತಿಳಿಸಿದರು.

ಕೋಬ್ರಾ ತಂಡದಲ್ಲಿನ ಮಹಿಳೆಯರು ಮೂರು ತಿಂಗಳ ಕಾಲ ತರಬೇತಿ ಪಡೆಯಬೇಕಾಗುತ್ತದೆ. ನಂತರ ನಕ್ಸಲ್ ಪೀಡಿತ ಜಿಲ್ಲೆ ಗಳಾದ ಛತ್ತೀಸ್ ಗಡ ಜಿಲ್ಲೆಯ ಸುಕ್ಮಾ, ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಕೋಬ್ರಾ ಘಟಕದೊಂದಿಗೆ ಸೇರ್ಪಡೆ ಮಾಡಿ ಕೊಳ್ಳಲಾಗುವುದು ಎಂದು ಸಿಆರ್ ಪಿಎಫ್ ವಕ್ತಾರ ತಿಳಿಸಿದ್ದಾರೆ.

ಮೊದಲ ಮಹಿಳಾ ಬೆಟಾಲಿಯನ್ ನ 35ನೇ ರೈಸಿಂಗ್ ಡೇ ವರ್ಷಾಚರಣೆ ಸಂದರ್ಭದಲ್ಲಿ ದೇಶದ ಅತಿದೊಡ್ಡ ಮಹಿಳಾ ಅರೆಸೇನಾ ಪಡೆ ಕೂಡಾ ಪಾಲ್ಗೊಂಡಿತ್ತು. 1986ರಲ್ಲಿ ದೆಹಲಿಯಲ್ಲಿ ಸಿಆರ್ ಪಿಎಫ್ ನೆಲೆಯಲ್ಲಿ 88 ಮಹಿಳೆಯರನ್ನೊಳಗೊಂಡ ಮೊದಲ ಬೆಟಾಲಿಯಾನ್ ತಂಡ ಉದಯಿಸಿತ್ತು. ಇದೀಗ ಆರು ಘಟಕಗಲಿದ್ದು, ತಲಾ 1 ಸಾವಿರ ಸಿಬ್ಬಂದಿಯನ್ನೊಳಗೊಂಡಿವೆ.