Sunday, 15th December 2024

ಐಇಡಿ ಸ್ಫೋಟ: ಸಿಆರ್​ಪಿಎಫ್​ ಯೋಧರಿಗೆ ಗಾಯ

ಛತ್ತೀಸ್​ಗಢ್: ​​ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟ ಗೊಂಡು ಸಿಆರ್​ಪಿಎಫ್​​ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ನಕ್ಸಲರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು, ಟೆಕಮೆಟಾ ಬೆಟ್ಟದ ಬಳಿ ಐಇಡಿ ಅಳವಡಿಸಿದ್ದರು. ಅದೇ ಮಾರ್ಗವಾಗಿ ತೆರಳುತ್ತಿದ್ದ, ಸಿಆರ್​ಪಿಎಫ್​ 85ನೇ ಬೆಟಾಲಿಯನ್​ನ ತಂಡದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಇವರೆಲ್ಲ ಹಿರೋಲಿಯಿಂದ ಪುಸ್ನರ್​ ಶಿಬಿರಕ್ಕೆ ತೆರಳುತ್ತಿದ್ದರು. ಈ ವೇಳೆ ಟೆಕಮೆಟಾ ಬೆಟ್ಟದ ಸಮೀಪ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡ ಇಬ್ಬರಿಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಕರೆದೊಯ್ಯಲಾಗಿದೆ.

ಛತ್ತೀಸ್​ಗಢ್​​ನ ದಂತೇವಾಡಾ ಜಿಲ್ಲೆಯ ಅರನ್​​ಪುರ ಎಂಬಲ್ಲಿ ಕಳೆದ ತಿಂಗಳು ಇಂಥದ್ದೇ ದುರಂತ ಆಗಿತ್ತು. ಛತ್ತೀಸ್​ಗಢ ಜಿಲ್ಲಾ ಮೀಸಲು ಪಡೆಯ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಐಇಡಿ ಅಳವಡಿಸಿ ಇಟ್ಟಿದ್ದರು. ಅದು ಸ್ಫೋಟಗೊಂಡ ಪರಿಣಾಮ 11 ಯೋಧರು ಮೃತಪಟ್ಟಿದ್ದರು.

ಮೇ ತಿಂಗಳ ಪ್ರಾರಂಭದಲ್ಲಿ ಬಿಜಾಪುರದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಕಮಾಂಡೋ ಬೆಟಾಲಿಯನ್ ಫಾರ್​ ರೆಸೊಲ್ಯೂಟ್ ಆಯಕ್ಷನ್​​ನ (ಕೋಬ್ರಾ) ​ಇಬ್ಬರು ಯೋಧರು ಗಾಯಗೊಂಡಿ ದ್ದರು.