Friday, 15th November 2024

Cyber Crime: ಡಿಜಿಟಲ್‌ ಅರೆಸ್ಟ್‌ ಕೇಸ್‌; ನಿವೃತ್ತ ಇಂಜಿನಿಯರ್‌ಗೆ ಒಂದಲ್ಲ ಎರಡಲ್ಲ..ಬರೋಬ್ಬರಿ 10 ಕೋಟಿ ರೂ. ಪಂಗನಾಮ ಹಾಕಿದ ಖದೀಮರು

Cyber Crime

ದೆಹಲಿ : 72 ವರ್ಷದ ನಿವೃತ್ತ ಇಂಜಿನಿಯರ್‌ನ್ನು ಅವರ ಮನೆಯಲ್ಲಿ ಎಂಟು ಗಂಟೆಗಳ ಕಾಲ “ಡಿಜಿಟಲ್ ಬಂಧನ” (Digital Arrest) ದಲ್ಲಿ ಇರಿಸಿಕೊಂಡು 10 ಕೋಟಿ ರೂ. ವಂಚಿಸಿದ ಪ್ರಕರಣದ ದೆಹಲಿಯ ರೋಹಿಣಿ ನಗರದಲ್ಲಿ ನಡೆದಿದೆ. (Cyber Crime) ನಿವೃತ್ತ ಇಂಜಿನಿಯರ್‌ ತನ್ನ ಪತ್ನಿ ಜೊತೆ ರೋಹಿಣಿ ನಗರದಲ್ಲಿ ವಾಸವಿದ್ದಾರೆ. ಹಣ ಪಾವತಿಸಿ ಇಲ್ಲವೇ ಮಾದಕ ವಸ್ತು ಸಾಗಾಟ ಕೇಸ್‌ನಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸೈಬರ್‌ ಖದೀಮರು ಅವರನ್ನು ಬೆದರಿಸಿದ್ದಾರೆ.

ನಿವೃತ್ತ ಇಂಜಿನಿಯರ್‌ ಹೇಳಿದ ಪ್ರಕಾರ ಸೈಬರ್‌ ಖದೀಮರು ತೈವಾನ್‌ನಿಂದ ನಿಮಗೆ ಪಾರ್ಸೆಲ್‌ ಬಂದಿದೆ ಅದನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದರು. ನಂತರ ಮಾತನ್ನು ಮುಂದುವರಿಸಿದ ವ್ಯಕ್ತಿ ನಿಮ್ಮ ಹೆಸರಲ್ಲಿರುವ ಪಾರ್ಸೆಲ್‌ನಲ್ಲಿ ನಿಷೇಧಿತ ಡ್ರಗ್ಸ್‌ ಇದ್ದು, ಅದನ್ನು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ತಡೆ ಹಿಡಿದಿದ್ದಾರೆ ನಿಮ್ಮ ಜತೆ ಕ್ರೈಂ ಬ್ರಾಂಚ್‌ನ ಸಿಬ್ಬಂದಿಯೊಬ್ಬರು ಮಾತನಾಡುತ್ತಾರೆ. ನೀವು ವಿಡಿಯೋ ಕಾಲ್‌ ಮೂಲಕ ಅವರ ಜತೆ ಮಾತನಾಡಿ ಎಂದು ಹೇಳಿದ್ದರು. ನಂತರ ವಿಡಿಯೋ ಕಾಲ್‌ ಮಾಡುವ ಆ್ಯಪ್‌ ಡೌನ್‌ಲೋಡ್‌ ಮಾಡಲು ಸೂಚನೆ ನೀಡಿದ್ದರು.

ನಂತರ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಇಂಜಿನಿಯರ್‌ ಗಾಬರಿಯಾಗಿದ್ದಾರೆ. ಅವರನ್ನು ಎಂಟು ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ನಿಮ್ಮನ್ನು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಸಂತ್ರಸ್ತರ ಮಕ್ಕಳು ವಿದೇಶದಲ್ಲಿದ್ದು ಹಣ ಕೊಡದಿದ್ದರೆ ಅವರ ಮೇಲೆ ಕೇಸ್‌ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆಯ ನಂತರ ಸಂತ್ರಸ್ತರು ಪೊಲೀಸರನ್ನು ದೂರು ನೀಡಿದ್ದಾರೆ. ತನಿಖೆ ಪ್ರಾರಂಭಿಸಿದ ಪೊಲೀಸರು ಅವರ ಖಾತೆಯಲ್ಲಿದ್ದ 60 ಲಕ್ಷ ರೂ. ಗಳನ್ನು ಸುರಕ್ಷಿತವಾಗಿಸಿದ್ದಾರೆ. ಘಟನೆ ಸಂಬಂಧ ಸೈಬರ್‌ ಬ್ರಾಂಚ್‌ನ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ವಿದೇಶದಿಂದ ಕರೆ ಮಾಡಿ ವಂಚನೆ ನಡೆದಿರಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: Sonam Wangchuk: ಅರೆಸ್ಟ್‌ ಆಗಿರುವ ಸೋನಂ ವಾಂಗ್‌ಚುಕ್‌ ಭೇಟಿಗೆ ಪೊಲೀಸರಿಂದ ಅಡ್ಡಿ; ದೆಹಲಿ ಸಿಎಂ ಆತಿಶಿ ಗರಂ

ಇತ್ತೀಚೆಗೆ ರೋಹಿಣಿ ನಗರದ ನಿವೃತ್ತ ವಿಜ್ಞಾನಿಯೊಬ್ಬರ ಮನೆಗೆ ಕೊರಿಯರ್‌ ನೀಡಲು ಬಂದ ನೆಪ ಮಾಡಿಕೊಂಡು ಅವರನ್ನು ಗೃಹ ಬಂಧನದಲ್ಲಿಟ್ಟು ದರೋಡೆ ಮಾಡಿದ ಘಟನೆ ನಡೆದಿತ್ತು. ದೆಹಲಿಯ ರೋಹಿಣಿ ನಗರದ ಪ್ರಶಾಂತ್ ವಿಹಾರ್ ನ ಪ್ರಶಾಂತ್ ವಿಹಾರ್‌ನ ಎಫ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ವಿಜ್ಞಾನಿ ಶಿಬು ಸಿಂಗ್ ತಮ್ಮ ಪತ್ನಿ ನಿರ್ಮಲಾ ಜೊತೆ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಕಿಡಿಗೇಡಿಗಳು ತಮ್ಮನ್ನು ಕೊರಿಯರ್ ಹುಡುಗರಂತೆ ಪರಿಚಯ ಮಾಡಿಕೊಂಡು ಮನೆಯೊಳಗೆ ಪ್ರವೇಶಿಸಿ ಮನೆಯೊಳಗೆ ಪ್ರವೇಶಿಸಿ, ಶಿಬು ಮತ್ತು ಅವರ ಪತ್ನಿ ನಿರ್ಮಲಾರನ್ನು ಹೆದರಿಸಿ ಬಂದೂಕು ತೋರಿಸಿ ಹಲ್ಲೆ ನಡೆಸಿ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.