Tuesday, 5th November 2024

Viral Video: ಸೈಕಲ್ ಸ್ಟಂಟ್ ತಂದ ಆಪತ್ತು; ಮನೆ ಗೋಡೆಗೆ ಅಪ್ಪಳಿಸಿ ಬಾಲಕ ದುರ್ಮರಣ: ದುರಂತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮುಂಬೈ: ಸೈಕಲ್ ಸ್ಟಂಟ್ (Cycle Stunt) ಬಾಲಕನೊಬ್ಬನ ಜೀವಕ್ಕೇ ಎರವಾದ ಘಟನೆ ಮಹಾನಗರಿಯ ಮೀರಾ-ಭಾಯಂದರ್ (Mira-Bhayandar) ಪ್ರದೇಶದಲ್ಲಿ ನಡೆದಿದ್ದು, ಈ ದುರ್ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಯು ಎದೆ ಝಲ್ ಎನ್ನಿಸುವಂತಿದೆ. ಸದ್ಯ ಈ ವಿಡಿಯೊ ನೋಡಿ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ (Viral Video).

16 ವರ್ಷದ ನೀರಜ್ ಯಾದವ್ ಎಂಬಾತನೇ ಈ ರೀತಿಯಾಗಿ ಮೃತಪಟ್ಟ ದುರ್ದೈವಿ. ಮೀರಾ-ಭಾಯಂದರ್ ಪ್ರದೇಶದಲ್ಲಿನ ಇಳಿಜಾರು ಪ್ರದೇಶದಲ್ಲಿ ಸೈಕಲ್ ಸ್ಟಂಟ್ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಮೀರಾ ರೋಡ್ ನಿವಾಸಿಯಾಗಿರುವ ನೀರಜ್, ಗೋಢ್ ಬಂಡರ್ ಬಂದರು ಕಡೆಗೆ ಸೈಕ್ಲಿಂಗ್ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಕಡಿದಾದ ಪ್ರದೇಶದಲ್ಲಿ ಆತ ಚಲಾಯಿಸುತ್ತಿದ್ದ ಸೈಕಲ್ ಆಯತಪ್ಪಿ ಮನೆಯೊಂದರ ಗೇಟ್ ಪಕ್ಕದ ಗೋಡೆಗೆ ಅಪ್ಪಳಿಸಿದೆ.

ಇದರಿಂದಾಗಿ ನೆಳಕ್ಕಪ್ಪಳಿಸಿದ ನೀರಜ್‌ಗೆ ರಕ್ತಸ್ರಾವವಾಗಿದೆ. ತಕ್ಷಣವೇ ಆತನನ್ನು ಸಮೀಪದಲ್ಲಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ‍್ಥಳೀಯ ಪೊಲೀಸರು ಅಪಘಾತ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಆಘಾತ ವ್ಯಕ್ತಪಡಿಸಿದ ನೆಟ್ಟಿಗರು

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊವನ್ನು ನೋಡಿ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ʼʼಅಪಘಾತದ ತೀವ್ರತೆಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ. ತಲೆ ಗೋಡೆಗೆ ಡಿಕ್ಕಿ ಹೊಡೆಯುವುದನ್ನು ನೋಡಲು ಸಾಧ್ಯವಿಲ್ಲ. ಅಷ್ಟು ಭಯಾನಕವಾಗಿದೆʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼತಮ್ಮ ಜೀವವನ್ನು ಪಣಕ್ಕಿಟ್ಟು ಯಾಕೆ ಮಕ್ಕಳು ಇಂತಹ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಾರೆ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ʼʼಬಹುಶಃ ಹೆಲ್ಮೆಟ್‌ ಧರಿಸಿದ್ದರೆ ಅಪಾಯವಾಗುತ್ತಿರಲಿಲ್ಲವೇನೋ?ʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಕಳವಳವನ್ನುಂಟು ಮಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ತಂದೆ-ಮಗಳ ಬೈಕ್‌ ರೈಡಿಂಗ್‌; ನೆಟ್ಟಿಗರ ಆಕ್ರೋಶ

ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳು ತನ್ನ ತಂದೆಯನ್ನು ಕೂರಿಸಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ವಿಡಿಯೊವನ್ನು ಔರಂಗಬಾದ್‍ ಇನಸೈಡರ್ ಎಂಬ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ “ಛತ್ರಪತಿ ಸಂಭಾಜಿನಗರದಿಂದ ಆಘಾತಕಾರಿ ದೃಶ್ಯಗಳು” ಎಂಬ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಲಾಗಿದೆ. ಈ ವೈರಲ್ ವಿಡಿಯೊದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯೊಬ್ಬಳು ತಂದೆಯನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ್ದಾಳೆ. ಅವರಿಬ್ಬರೂ ಹೆಲ್ಮೆಟ್‌ ಕೂಡ ಹಾಕಿರಲಿಲ್ಲ. ಈ ವಿಡಿಯೊ ಕಂಡು ಜನರು ಆಕ್ರೋಶಗೊಂಡಿದ್ದಾರೆ.

ಈ ವಿಡಿಯೊ ನೋಡಿದ ಅನೇಕರು ತಂದೆ ಮಗಳ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಕಾಮೆಂಟ್‌ ಹಾಕಿದ್ದಾರೆ. “ದಯವಿಟ್ಟು ಪೋಷಕರು ತಮ್ಮ ಮಗುವಿನ ಬಗ್ಗೆ ಜವಾಬ್ದಾರಿಯುತವಾಗಿರಬೇಕು” ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಹೀಗಾಗಿಯೇ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಇವರು ಯಾವ ರೀತಿಯ ತಂದೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಹಂಪ್‌ ಮೇಲೆ ರಾಕೆಟ್ ರೀತಿ ಹಾರಿದ ಕಾರು; ವಿಡಿಯೊ ವೈರಲ್