Saturday, 14th December 2024

ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ: ಐವರ ಸಾವು

ಜೋಧಪುರ: ರಾಜಸ್ಥಾನದ ಜೋಧ್ಪುರದಲ್ಲಿ ಮದುವೆಗಾಗಿ ಅತಿಥಿಗಳು ಸೇರಿದ್ದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟು 49 ಮಂದಿ ಗಾಯಗೊಂಡಿದ್ದಾರೆ.
ಭೂಂಗಾರ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟ ಗೊಂಡಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಎಂಜಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರಿಗೆ ಶೇ 80ರಿಂದ 100ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುಮಗ ಸುರೇಂದ್ರ ಸಿಂಗ್ ಅವರ ಮನೆಯಲ್ಲಿ ಅತಿಥಿಗಳು ಜಮಾಯಿಸಿದ್ದರು ಮತ್ತು ಅವರಿಗೆ ಆಹಾರವನ್ನು ಸಿದ್ಧಪಡಿಸ ಲಾಯಿತು. ಮನೆಯ ಸ್ಟೋರ್ ರೂಂನಲ್ಲಿ ಇರಿಸ ಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಗೊಂಡಿದೆ ಎಂದು ಜೋಧ್ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅನಿಲ್ ಕಯಾಲ್ ಹೇಳಿದ್ದಾರೆ. ಇತರ ಅತಿಥಿಗಳು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಇಬ್ಬರು ಮಕ್ಕಳಾದ ರತನ್ ಸಿಂಗ್ (5) ಮತ್ತು ಖುಷ್ಬೂ (4) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಎಲ್ಲಾ ಗಾಯಾಳುಗಳನ್ನು ಎಂಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಯಲ್ ಹೇಳಿದರು. ಸ್ಫೋಟದಲ್ಲಿ 49ಮಂದಿ ಗಾಯ ಗೊಂಡಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ.

ಎಂಜಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಜ್ ಶ್ರೀ ಬೆಹ್ರಾ ಅವರು ಆಸ್ಪತ್ರೆಗೆ ಕರೆತರಲಾದ ಹತ್ತಕ್ಕೂ ಹೆಚ್ಚು ಗಾಯಾಳುಗಳು ಶೇಕಡಾ 80-100 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.