Monday, 18th November 2024

Daksh Gupta: ವಾರದಲ್ಲಿ 84 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕು ಎಂದ ಭಾರತೀಯ-ಅಮೆರಿಕನ್ ಸಿಇಒಗೆ ಜೀವ ಬೆದರಿಕೆ

Daksh Gupta

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಐ ಸ್ಟಾರ್ಟ್ಅಪ್ ಗ್ರೆಪ್ಟೈಲ್‍ನ ಸಿಇಒ ದಕ್ಷ್ ಗುಪ್ತಾ(Daksh Gupta) ಅವರು ಉದ್ಯೋಗಿಗಳು ವಾರದಲ್ಲಿ 84 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕು ಎಂದು ತಮ್ಮದೇ ಆದ ಕೆಲಸ ವಿಧಾನಗಳನ್ನು  ಬಹಿರಂಗಪಡಿಸಿದ ನಂತರ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಇದಾದ ನಂತರ ಅವರಿಗೆ  ಕೊಲೆ ಬೆದರಿಕೆಗಳು ಬಂದಿವೆಯಂತೆ. ಹೀಗಾಗಿ ಹೆಚ್ಚುತ್ತಿರುವ ವಿವಾದದ ನಡುವೆ ಸಿಇಒ ತಮ್ಮ ಕಂಪನಿಯ ಕಠಿಣ ಕೆಲಸದ ವಿಧಾನವನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದಾರೆ.

ಸಿಇಒ ದಕ್ಷ್ ಗುಪ್ತಾ ಅವರು ಟ್ವೀಟ್‍ ಮಾಡಿ, “ಉದ್ಯೋಗಿಗಳು ವಾರದಲ್ಲಿ 84 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕು. ಸಾಮಾನ್ಯ ಕೆಲಸದ ದಿನಗಳು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ರಾತ್ರಿ 11 ಗಂಟೆಗೆ ಕೊನೆಗೊಳ್ಳುತ್ತವೆ, ನಂತರ ಶನಿವಾರ, ಕೆಲವೊಮ್ಮೆ ಭಾನುವಾರವೂ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.

“ಮೊದಲಿಗೆ ಇದನ್ನು ಮಾಡುವುದು ತಪ್ಪು ಎಂದು ನನಗೆ  ಅನಿಸಿತು.  ಆದರೆ ಇದು ಉತ್ತಮವ ಕಾರ್ಯ ವಿಧಾನ ಎಂದು ನನಗೆ ಈಗ ಮನವರಿಕೆಯಾಗಿದೆ” ಎಂದಿದ್ದಾರೆ. ಈ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.  1.6 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಜೊತೆಗೆ ಸಾವಿರಾರು ಜನರು ಇದಕ್ಕೆ ಕಾಮೆಂಟ್‍ಗಳು ಮತ್ತು ರಿಟ್ವೀಟ್‍ಗಳನ್ನು ಮಾಡಿದ್ದಾರೆ.  ಇದು ಕೆಲಸದ ಸಮಯ ಮತ್ತು ಕೆಲಸ-ಜೀವನ ಬ್ಯಾಲೆನ್ಸ್ ಮಾಡುವ  ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.  ಕೆಲವರು ಇವರು ಉದ್ಯಮಿ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರೆ, ಇತರರು ಅವರ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.

ಇದಕ್ಕೆ ಒಬ್ಬರು ಕಾಮೆಂಟ್ ಮಾಡಿ, “ ದುಪ್ಪಟ್ಟು ಆದಾಯ ಕೊಡದೆ ನೀವು ಅವರಿಗೆ  ಎರಡು ಪಟ್ಟು ಕಷ್ಟಪಟ್ಟು ಕೆಲಸ ಮಾಡಲು ಹೇಳಿದರೆ ನಿಮಗಾಗಿ ಕೆಲಸ ಮಾಡಲು ಅವರು ಏಕೆ ಒಪ್ಪುತ್ತಾರೆ? “ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ʼʼಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಕಡಿಮೆ ಕೆಲಸದ ಅವಧಿಯನ್ನು ನೀಡುವುದರ ಜೊತೆಗೆ ವಾರಾಂತ್ಯದ ರಜೆ ನೀಡಿದರೆ  ನಿಮ್ಮ ಕಂಪನಿ ಯಶಸ್ವಿಯಾಗುತ್ತದೆ” ಎಂದು ಹೇಳಿದ್ದಾರೆ.

ಇದರ ಜೊತೆಗೆ ಅನೇಕರು ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸಿಇಒ, ” ನನ್ನ ಇನ್ಬಾಕ್ಸ್‌ನಲ್ಲಿ 20% ಕೊಲೆ ಬೆದರಿಕೆಗಳು ಮತ್ತು 80% ಉದ್ಯೋಗ ಅರ್ಜಿಗಳಿವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹೊಂಚು ಹಾಕಿ ಸಾಕು ನಾಯಿ ಮೇಲೆ ಚಿರತೆ ದಾಳಿ; ಈ ಶಾಕಿಂಗ್‌ ವಿಡಿಯೊ ಇಲ್ಲಿದೆ

ಅಂತಿಮವಾಗಿ, ಅವರು ಕೆಲಸದ ವಿಧಾನವು ಅವರ ಭಾರತೀಯ ಪರಂಪರೆಯಿಂದ ಮಾಡಿಲ್ಲ ಆದರೆ ಅವರ ಸ್ಯಾನ್ ಫ್ರಾನ್ಸಿಸ್ಕೋ ಮನಸ್ಥಿತಿಯಿಂದ ರೂಪುಗೊಂಡಿದೆ ಎಂದು ಹೇಳಿದ್ದಾರೆ.  “ಈ ಪೋಸ್ಟ್‌ನಿಂದ ಬಹಳಷ್ಟು ಭಾರತೀಯರಿಗೆ ನನ್ನ ಮೇಲೆ ಸಿಟ್ಟು ಇರಬಹುದು. ಆದರೆ ನಾನು ಈ ರೀತಿ ಇರಲು ಕಾರಣ ನಾನು ಭಾರತೀಯನಲ್ಲ, ನಾನು ಸ್ಯಾನ್ ಫ್ರಾನ್ಸಿಸ್ಕನ್” ಎಂದು ತಿಳಿಸಿದ್ದಾರೆ.