ಬೆಳಕಿನ ಹಬ್ಬ ದೀಪಾವಳಿ (Deepavali 2024) ಮತ್ತೆ ಬಂದಿದೆ. ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನಡೆಗೆ ಸಾಗುವ ಸಂಕೇತವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೇಶಾದ್ಯಂತ ಅತ್ಯಂತ ವೈಭವದಿಂದ ಆಚರಿಸಲ್ಪಡುವ ದೀಪಾವಳಿಯನ್ನು ಈ ಬಾರಿ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಆಚರಿಸಲಾಗುತ್ತದೆ.
ದೇಶದ ವಿವಿಧ ಭಾಗಗಳಲ್ಲಿ ಐದು, ನಾಲ್ಕು ಮೂರು ದಿನಗಳಲ್ಲಿ ಆಚರಿಸಲ್ಪಡುವ ದೀಪಾವಳಿ ಹಬ್ಬದ ಸಂಭ್ರಮ ಅಕ್ಟೋಬರ್ 29ರಿಂದ ನವೆಂಬರ್ 2ರವರೆಗೆ ಇರಲಿದೆ.
ಅಕ್ಟೋಬರ್ 29ರಂದು ಧನ್ತೇರಸ್, 30ರಂದು ನೀರು ತುಂಬಿಸುವ ಹಬ್ಬ, 31ರಂದು ನರಕ ಚತುರ್ದಶಿ, ದೀಪಾವಳಿ, ನವೆಂಬರ್ 1 ದೀಪಾವಳಿ, ನವೆಂಬರ್ 2ರಂದು ಬಲಿಪಾಡ್ಯ, ಗೋಪೂಜೆ ನಡೆಯಲಿದೆ.
ದೀಪಾವಳಿ ಆಚರಣೆ ಯಾವಾಗ ?
ದೃಕ್ ಪಂಚಾಂಗದ ಪ್ರಕಾರ ದೀಪಾವಳಿಯು ಗುರುವಾರ ಅಂದರೆ ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆಯನ್ನು ನಡೆಸಲಾಗುತ್ತದೆ. ಯಾಕೆಂದರೆ ಆ ದಿನ ಸಂಜೆ ಅಮವಾಸ್ಯೆ ಇರಲಿದೆ. ಲಕ್ಷ್ಮೀ ಪೂಜೆ ಮುಹೂರ್ತ ಅಕ್ಟೋಬರ್ 31ರಂದು ಮಧ್ಯಾಹ್ನ 3.12ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 1 ರಂದು ಸಂಜೆ 5.14 ಕ್ಕೆ ಕೊನೆಗೊಳ್ಳುತ್ತದೆ.
ಹಬ್ಬದ ಮಹತ್ವ ಏನು?
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಇದು ದುಷ್ಟರ ವಿರುದ್ಧ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ರಾಮ, ಸೀತೆ ಮತ್ತು ಲಕ್ಷ್ಮಣರು ತಮ್ಮ 14 ವರ್ಷಗಳ ವನವಾಸವನ್ನು ಮುಗಿಸಿ ರಾವಣನನ್ನು ಸೋಲಿಸಿದ ಅನಂತರ ಅಯೋಧ್ಯೆಗೆ ಮರಳಿದ್ದರ ಸಂಭ್ರವನ್ನು ಇಂದಿಗೂ ದೀಪಾವಳಿಯನ್ನು ಆಚರಿಸಲಾಗುತ್ತದೆ.
ಈ ದಿನ ಜನರು ತಮ್ಮ ಮನೆಗಳನ್ನು ಅಲಂಕರಿಸಿ ಹೊಸ ಬಟ್ಟೆಗಳನ್ನು ಧರಿಸಿ ಪ್ರೀತಿಪಾತ್ರರೊಂದಿಗೆ ಉಡುಗೊರೆ, ರುಚಿಕರವಾದ ಸಿಹಿ ತಿಂಡಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಲಕ್ಷ್ಮೀ ಮತ್ತು ಗಣೇಶ ದೇವರ ಆರಾಧನೆಯನ್ನು ನಡೆಸಲಾಗುತ್ತದೆ.
ಯಾವ ಆಚರಣೆ ಯಾಕಾಗಿ?
ಧನ್ತೇರಸ್ ದಿನದಂದು ಲಕ್ಷ್ಮಿ ದೇವಿ ಜೊತೆಗೆ ಕುಬೇರನನ್ನು ಪೂಜಿಸಲಾಗುತ್ತದೆ. ಈ ದಿನ ಚಿನ್ನ, ಬೆಳ್ಳಿ ಅಥವಾ ಲೋಹವನ್ನು ಖರೀದಿಸುವದು ಮಂಗಳಕರವೆಂದು ಪರಿಗಣಿಸಲಾಗಿದೆ.
16 ಸಾವಿರ ಹೆಣ್ಣು ಮಕ್ಕಳನ್ನು ಅಪಹರಿಸಿದ ನರಕಾಸುರನನ್ನು ಶ್ರೀಕೃಷ್ಣ ಕೊಂದ ದಿನದಂದು ಕಿರು ದೀಪಾವಳಿ ಅಥವಾ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ.
ದೀಪಾವಳಿಯಂದು ಜನರು ತಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಈ ದಿನ ರಾವಣನನ್ನು ಕೊಂದ ಅನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ್ದನ್ನು ಇದು ಸೂಚಿಸುತ್ತದೆ. ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಮನೆಗೆ ಅದೃಷ್ಟ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆ ಇದೆ.
Deepavali: ದೀಪಾವಳಿ ಆಚರಣೆ ಯಾವಾಗ? ಅಕ್ಟೋಬರ್ 31ರಂದೋ ನವೆಂಬರ್ 1ರಂದೋ?
ದೀಪಾವಳಿಯ ಅನಂತರದ ದಿನ ಗೋವರ್ಧನ ಪೂಜೆ ನಡೆಯುತ್ತದೆ. ಈ ದಿನ ಶ್ರೀಕೃಷ್ಣನ ಆರಾಧನೆ, ಗೋವರ್ಧನ ಪರ್ವತದ ಪೂಜೆ, ಗೋಪೂಜೆಯನ್ನು ನಡೆಸಲಾಗುತ್ತದೆ.