Saturday, 26th October 2024

Deepavali 2024: ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡುವುದೇಕೆ? ಏನಿದರ ಮಹತ್ವ?

Deepavali 2024

ದೀಪಾವಳಿಯೆಂದರೆ ಕಣ್ಣಿನಲ್ಲಿ ಸಾವಿರ ಬೆಳಕು ಮೂಡುತ್ತದೆ. ಈ ಹಬ್ಬದ ಸಂಭ್ರಮ, ಸಡಗರ ಅದ್ಧೂರಿಯಾಗಿ ಇರುತ್ತದೆ. ಮನೆಮಂದಿಯೆಲ್ಲಾ ಸೇರಿ ಸಂಭ್ರಮಿಸುವ ಈ ಹಬ್ಬ ನೀಡುವ ಖುಷಿ ಅಮೋಘವಾದದ್ದು. ದೀಪಾವಳಿ (Deepavali 2024) ಹಬ್ಬವನ್ನು ಅಮಾವಾಸ್ಯೆಯ ದಿನ ಆಚರಿಸಲಾಗುತ್ತದೆ. ಕತ್ತಲೆಯ ಅಮಾವಾಸ್ಯೆಯ ರಾತ್ರಿಯಲ್ಲಿ ಎಲ್ಲಾ ಕಡೆ ದೀಪಗಳನ್ನು ಹಚ್ಚುವುದರಿಂದ ಈ ರಾತ್ರಿ ವಿಶೇಷವಾಗಿ ಕಾಣುತ್ತದೆ. ಹಾಗಾದರೆ ಈ ಹಬ್ಬದ ಸಮಯ, ಆಚರಣೆ, ಮಹತ್ವ, ಇತಿಹಾಸದ ಬಗ್ಗೆ ಈಗ ತಿಳಿದುಕೊಳ್ಳೊಣ.

Deepavali 2024

ದೀಪಾವಳಿ ಹಬ್ಬದ ಸಮಯ
ದೀಪಾವಳಿ ಕಾರ್ತಿಕ ಮಾಸದಲ್ಲಿ ಆಚರಿಸುವ ಹಬ್ಬ. ಇದು ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ಮಧ್ಯದಲ್ಲಿ ಬರುತ್ತದೆ. ಪ್ರಾಚೀನ ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯನ್ನು ಪ್ರತಿವರ್ಷ ಕಾರ್ತಿಕ ಮಾಸದ ಹದಿನೈದನೇ ದಿನವಾದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಹಾಗಾಗಿ ಈ ದಿನವನ್ನು ಕಾರ್ತಿಕ ಅಮಾವಾಸ್ಯೆ ಕೂಡ ಎಂದೂ ಕರೆಯಲಾಗುತ್ತದೆ. ಈ ಬಾರಿ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31ರ ಗುರುವಾರ ಆಚರಿಸಲಾಗುವುದು. ದೃಕ್ ಪಂಚಾಂಗದ ಪ್ರಕಾರ, ಲಕ್ಷ್ಮಿ ಪೂಜೆಯನ್ನು ಇದೇ ದಿನ ಮಾಡಲಾಗುತ್ತದೆ.

Deepavali 2024

ದೀಪಾವಳಿ ಹಬ್ಬದ ಆಚರಣೆ
ದೀಪಾವಳಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.  ಜನ ಮೂರು ದಿನ ತಮ್ಮ ಮನೆಗಳು ಮತ್ತು ಬೀದಿಗಳಲ್ಲಿ ದೀಪ, ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಸಂಭ್ರಮಿಸುತ್ತಾರೆ. ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ರುಚಿಕರವಾದ ಸಾಂಪ್ರದಾಯಿಕ ಆಹಾರವನ್ನು ತಯಾರಿಸಿ ಖುಷಿಯಿಂದ ಹಬ್ಬವನ್ನು ಆಚರಿಸುತ್ತಾರೆ.

Deepavali 2024

ದೀಪಾವಳಿದ ಹಬ್ಬದ ಆಚರಣೆ ಹಿಂದಿನ ಇತಿಹಾಸ ಮತ್ತು ಮಹತ್ವ ಏನು?
ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದು, ಇದು  ಹೆಚ್ಚಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ. ದೀಪಗಳನ್ನು ಬೆಳಗಿಸುವುದು ಆಧ್ಯಾತ್ಮಿಕ ಕತ್ತಲೆಯಿಂದ ರಕ್ಷಿಸುವ ಆಂತರಿಕ ಬೆಳಕನ್ನು ಪ್ರತಿನಿಧಿಸುತ್ತದೆ. ದಂತಕಥೆಯ ಪ್ರಕಾರ, ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನು ರಾಕ್ಷಸ ರಾಜ ರಾವಣನನ್ನು ಸೋಲಿಸಿದ್ದನು. ಹಾಗಾಗಿ  ಆ ದಿನದಂದು ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುತ್ತಾರೆ. ಅದೇರೀತಿ  ನಂತರ ರಾಕ್ಷಸನ ಸಂಹಾರದ ಬಳಿಕ ಶ್ರೀರಾಮನು ಅಯೋಧ್ಯೆ ರಾಜ್ಯಕ್ಕೆ ಮರಳುತ್ತಾನೆ. ಆಗ ಅಲ್ಲಿನ ಪ್ರಜೆಗಳು ತಮ್ಮ ರಾಜನು ರಾಜ್ಯಕ್ಕೆ ಬಂದ ಖುಷಿಗೆ ಮನೆಗಳ ಮುಂದೆ ರಂಗೋಲಿ ಇಟ್ಟು ಹಾಗೇ ಅದೇ ದಿನ ಅಮಾವಾಸ್ಯೆಯ ಕತ್ತಲು ಚಂದ್ರನಿಲ್ಲದ ಕಾರಣ ದೀಪವನ್ನು ಬೆಳಗಿಸುವ ಮೂಲಕ ತಮ್ಮ ರಾಜನನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಂದಿಗೂ ಈ ದಿನದಂದು ದೀಪಗಳನ್ನು ಬೆಳಗುತ್ತಾ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಮತ್ತೊಂದೆಡೆ, ದಕ್ಷಿಣ ಭಾರತದಲ್ಲಿ, ಜನರು ಈ ದಿನದಂದು ಕೃಷ್ಣನು ನರಕಾಸುರ ಎಂಬ ಕ್ರೂರ ರಾಕ್ಷಸನನ್ನು ಸೋಲಿಸಿದ ದಿನವೆಂದು ಆಚರಿಸುತ್ತಾರೆ. ಇದಲ್ಲದೆ, ವಿಷ್ಣು ಮತ್ತು ಲಕ್ಷ್ಮಿ ದೇವಿಯು ಈ ದಿನದಂದು ವಿವಾಹವಾದರು ಎಂದು ನಂಬಲಾಗಿದೆ.

ದೀಪಾವಳಿಯಂದು ಲಕ್ಷ್ಮಿ ಪೂಜೆಯ ವಿಶೇಷತೆ
ಪ್ರಪಂಚದಾದ್ಯಂತ, ಜನರು ದೀಪಗಳ ಹಬ್ಬವಾದ ದೀಪಾವಳಿಯನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಪ್ರತಿ ಮನೆಯಲ್ಲೂ ಜನರು ದೀಪಗಳನ್ನು ಬೆಳಗಿಸುತ್ತಾರೆ. ಹಾಗೆಯೇ ಈ ದಿನ ಲಕ್ಷ್ಮಿ ಪೂಜೆಯನ್ನು ಕೂಡ ಮಾಡುತ್ತಾರೆ. ದಂತಕಥೆಗಳ ಪ್ರಕಾರ ಲಕ್ಷ್ಮಿ ದೇವಿಯು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಂದು ಜನಿಸಿದಳು. ಹಾಗಾಗಿ ಈ ದಿನ ಲಕ್ಷ್ಮಿದೇವಿಯ ಪೂಜೆ ಮಾಡುತ್ತಾರೆ.

ಇದನ್ನೂ ಓದಿ:ಹೆಂಡತಿ ಒಪ್ಪಿಗೆಯಿಲ್ಲದೆ ಆಭರಣ ಅಡವಿಟ್ಟರೆ ಜೈಲು ಶಿಕ್ಷೆ; ಹೈಕೋರ್ಟ್ ತೀರ್ಪು

ಈ ದಿನ ಬೆಲೆಬಾಳುವ ವಸ್ತುಗಳನ್ನು ಇಟ್ಟು ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಪೂಜೆ ಮುಗಿದ ನಂತರ ಭಕ್ತರು ತಮ್ಮ ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಸಿಹಿತಿಂಡಿಗಳು, ಉಡುಗೊರೆಗಳನ್ನು ವಿತರಿಸುತ್ತಾರೆ. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ದೀಪಗಳನ್ನು ಬೆಳಗಿಸುತ್ತಾರೆ.