ಹಬ್ಬದ (festival) ವೇಳೆ ರಂಗೋಲಿ (Rangoli) ಹಾಕದಿದ್ದರೆ ಹೇಗೆ? ಯಾವುದೇ ಹಬ್ಬ ಹರಿದಿನಗಳಾಗಲಿ ರಂಗೋಲಿ ಇಲ್ಲದೆ ಪೂರ್ಣ ಎಂದೆನಿಸುವುದೇ ಇಲ್ಲ. ಇನ್ನು ದೀಪಾವಳಿ ಹಬ್ಬದಲ್ಲಿ (Deepavali 2024) ಬಣ್ಣಗಳದ್ದೇ ಆಟ. ಹೀಗಿರುವಾಗ ರಂಗೋಲಿ ಹಾಕದಿದ್ದರೆ ಹೇಗೆ?
ದೀಪಾವಳಿ ಹಬ್ಬವೆಂದರೆ ಮನೆಮನೆಯಲ್ಲೂ ದೀಪಗಳನ್ನು ಬೆಳಗಿಸಲಾಗುತ್ತದೆ. ಇದರ ಜೊತೆಗೆ ಮನೆಯ ಸೌಂದರ್ಯ ಹೆಚ್ಚಿಸಲು ಬಣ್ಣಬಣ್ಣದ ರಂಗೋಲಿ ಬರೆಯಲಾಗುತ್ತದೆ. ಅಲ್ಲದೇ ತಳಿರು ತೋರಣಗಳಿಂದ ಮನೆಯನ್ನು ಅಲಂಕರಿಸಲಾಗುತ್ತದೆ.
ರಂಗೋಲಿ ಬಿಡಿಸುವುದೆಂದರೆ ಸಾಕಷ್ಟು ಹೊತ್ತು ನೆಲದ ಮೇಲೆ ಕುಳಿತು ಶ್ರದ್ದೆ ಮತ್ತು ಪ್ರೀತಿಯಿಂದ ಮಾಡಬೇಕಾದ ಕೆಲಸ. ಆದರೆ ಈಗ ಅಷ್ಟು ತಾಳ್ಮೆ ಯಾರಿಗಿದೆ. ಎಲ್ಲ ಕೆಲಸಗಳೂ ಬೇಗಬೇಗನೆ ಮುಗಿಯಬೇಕು, ಇನ್ನು ಶ್ರದ್ದೆ, ತಾಳ್ಮೆ, ಪ್ರೀತಿ ಎಲ್ಲಿಂದ ಬರಬೇಕು. ಅಷ್ಟು ಮಾತ್ರವಲ್ಲ ಈಗ ನಿತ್ಯದ ಕೆಲಸದ ಒತ್ತಡದಲ್ಲಿರುವವರಿಗೆ ರಂಗೋಲಿ ಬರೆಯುವುದು ಕೂಡ ಸರಿಯಾಗಿ ಗೊತ್ತಿರುವುದಿಲ್ಲ.
ಮನೆಗೆ ದೀಪಾವಳಿಯ ಹೊಳಪನ್ನು ತಕ್ಷಣವೇ ನೀಡುವ ಒಂದು ಅಲಂಕಾರ ರಂಗೋಲಿ. ಇದನ್ನು ಬಿಡಿಸಲು ಕೆಲವೊಂದು ಸುಲಭ ಉಪಾಯಗಳಿವೆ.
ಅಚ್ಚುಗಳನ್ನು ಬಳಸಿ
ರಂಗೋಲಿಯನ್ನು ಕೆಲವು ಅಚ್ಚುಗಳನ್ನು ಬಳಸಿ ಸುಲಭವಾಗಿ ಬಿಡಿಸಬಹುದು. ಬಟ್ಟಲು, ಬಳೆ ಸೇರಿದಂತೆ ಕೆಲವು ಗೃಹೋಪಯೋಗಿ ವಸ್ತುಗಳಿಂದ ರಂಗೋಲಿಯನ್ನು ಹಾಕಬಹುದು. ಒಂದು ಪರಿಪೂರ್ಣ ವೃತ್ತದ ಬಾಹ್ಯರೇಖೆಯನ್ನು ಹಾಕಿ, ಹೂವಿನ ದಳಕ್ಕೆ ಒಂದು ಚಮಚವನ್ನು ಬಳಸಿ. ಅಲ್ಲದೇ ಕಾರ್ಡ್ ಬೋರ್ಡ್ ನಿಂದಲೂ ಅಚ್ಚು ತಯಾರಿಸಿ ರಂಗೋಲಿಯನ್ನು ಹಾಕಬಹುದು.
ಇನ್ನು ಸೀಮೆಸುಣ್ಣದಿಂದ ವಿನ್ಯಾಸ ಮಾಡಿ ಬಳಿಕ ಬಣ್ಣಗಳಿಂದ ಅದನ್ನು ತುಂಬಿ. ಇದು ಹೆಚ್ಚು ಸ್ಪಷ್ಟವಾಗಿ ಬರಲು ಮೊದಲು ಚಿತ್ರವನ್ನು ಕಾಗದದಲ್ಲಿ ಬರೆಯಿರಿ.
ಉತ್ತಮ ಸ್ಥಳ ಆಯ್ದುಕೊಳ್ಳಿ
ರಂಗೋಲಿ ಬರೆಯುವ ಸ್ಥಳ ಸಮತಟ್ಟಾಗಿ ಇರಲಿ ಮತ್ತು ಸರಿಯಾದ ಬೆಳಕು ಬೀಳುವಂತಿರಲಿ. ಇದರಿಂದ ಚಿತ್ರ ಬಿಡಿಸುವುದು ಸುಲಭವಾಗುತ್ತದೆ. ರಂಗೋಲಿಯನ್ನು ಲಿವಿಂಗ್ ರೂಮ್, ಪೂಜಾ ಕೊಠಡಿ ಅಥವಾ ಪ್ರವೇಶದ್ವಾರದಲ್ಲಿ ಇರಿಸಿ. ಹೀಗೆ ರಂಗೋಲಿ ಇಡುವಾಗ ಅತಿಥಿಗಳು ಪ್ರವೇಶಿಸಲು ತೊಂದರೆಯಾಗದಂತಿರಲಿ.
ವಿವಿಧ ಉಪಕರಣ ಬಳಸಿ
ರಂಗೋಲಿ ಹೆಚ್ಚು ನಿಖರವಾಗಿ ಬರಲು ಕೆಲವು ನಿರ್ದಿಷ್ಟ ಉಪಕರಣಗಳನ್ನು ಬಳಸಿ. ಉದಾಹರಣೆಗೆ ಚಹಾ ಸೋಸುವ ಜಾಲಿ, ಖಾಲಿ ಅಂಟು ಬಾಟಲಿಗಳು, ಸಾಸ್ ಡಬ್ಬಗಳು ಇತ್ಯಾದಿ. ಬಣ್ಣಗಳನ್ನು ಹೆಚ್ಚು ತೆಳು, ಗಾಢವಾಗಿ ಬಿಡಿಸಬಹುದು.
Deepavali Vastu Tips: ದೀಪಾವಳಿ ಪೂಜೆ ಸಂದರ್ಭದಲ್ಲಿ ಈ ವಾಸ್ತು ನಿಯಮ ಪಾಲಿಸಿ
ನೆನಪಿಡಬೇಕಾದ ಸಂಗತಿ
ರಂಗೋಲಿ ವಿನ್ಯಾಸಕ್ಕೆ ಮುಖ್ಯ ಅಗತ್ಯವೆಂದರೆ ಯೋಜನೆ ಮತ್ತು ಅಭ್ಯಾಸ. ಒಮ್ಮೆ ವಿನ್ಯಾಸ ಮಾಡಲು ಕಲಿತರೆ ಮತ್ತೆ ರಂಗೋಲಿ ಬರೆಯುವುದು ಕಷ್ಟವಾಗುವುದಿಲ್ಲ. ಆರಂಭಿಕ ಪ್ರಯತ್ನಗಳು ಎಂದಿಗೂ ಪರಿಪೂರ್ಣವಾಗಿರುವುದಿಲ್ಲ. ಉತ್ಸಾಹ ಮತ್ತು ಅಭ್ಯಾಸವನ್ನು ಮುಂದುವರಿಸಿ. ಮೊದಲು ಸರಳ ವಿನ್ಯಾಸಗಳ ರಂಗೋಲಿಯನ್ನು ಬರೆದು ಅಭ್ಯಾಸ ಮಾಡಿ.