Monday, 25th November 2024

Deepavali 2024: ದೀಪಾವಳಿಯಂದು ಅಯೋಧ್ಯೆಯಲ್ಲಿ ಬೆಳಗಲಿವೆ 28 ಲಕ್ಷ ದೀಪ! ಗಿನ್ನಿಸ್‌ ದಾಖಲೆಯ ಗುರಿ

Deepavali 2024

ವಿಶ್ವದಾದ್ಯಂತ ದೀಪಾವಳಿ (Deepavali 2024) ಹಬ್ಬದ ಸಂಭ್ರಮ ಬುಧವಾರದಿಂದ ಪ್ರಾರಂಭವಾಗಲಿದೆ. ಆದರೆ ಅಯೋಧ್ಯೆಯಲ್ಲಿ (deepavali in ayodhya) ಉತ್ಸವ ಯಾವಾಗ ಎನ್ನುವ ಕುರಿತು ಹೆಚ್ಚಿನವರಿಗೆ ಗೊಂದಲವಿದೆ. ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ (vishwa hindu parishad) ವಕ್ತಾರ ಶರದ್ ಶರ್ಮಾ ಮಾಹಿತಿ ನೀಡಿದ್ದಾರೆ.

ಈ ವರ್ಷದ ದೀಪಾವಳಿ ಹಬ್ಬವು ಅಮವಾಸ್ಯೆಯೊಂದಿಗೆ ಸೇರಿಕೊಂಡಿದೆ. ಅಮಾವಾಸ್ಯೆಯು ಅಕ್ಟೋಬರ್ 31ರಂದು ಅಪರಾಹ್ನ ಪ್ರಾರಂಭವಾಗಿ ನವಂಬರ್ 1ರಂದು ಸಂಜೆಯವರೆಗೆ ಇರಲಿದೆ. ಹೀಗಾಗಿ ಅಯೋಧ್ಯೆಯಲ್ಲಿ ದೀಪೋತ್ಸವವು ಅಕ್ಟೋಬರ್ 31ರಂದು ರಾತ್ರಿ ಪ್ರಾರಂಭವಾಗುತ್ತದೆ ಎಂದು ಶರದ್ ಶರ್ಮಾ ತಿಳಿಸಿದ್ದಾರೆ.

ದೀಪೋತ್ಸವ ಮತ್ತು ಹನುಮ ಜಯಂತಿ

ಅಕ್ಟೋಬರ್ 30ರಂದು ಅಂದರೆ ದೀಪಾವಳಿಯ ಹಿಂದಿನ ದಿನ ದೀಪೋತ್ಸವವನ್ನು ಆಚರಿಸಲಾಗುತ್ತದೆ. ದೀಪಗಳನ್ನು ಬೆಳಗಿಸಿ ಮನೆ, ದೇವಾಲಯಗಳನ್ನು ಅಲಂಕರಿಸಲಾಗುತ್ತದೆ. ಈ ಮೂಲಕ ದೀಪಾವಳಿ ಹಬ್ಬದ ಸಂಭ್ರಮ ಅಕ್ಟೋಬರ್ 30ರಂದೇ ಪ್ರಾರಂಭವಾಗುತ್ತದೆ. ಈ ವರ್ಷ ದೀಪೋತ್ಸವವು ಹನುಮಾನ್ ಜಯಂತಿ ಒಟ್ಟಿಗೆ ಬಂದಿದೆ. ಹೀಗಾಗಿ ಅಯೋಧ್ಯೆಯಲ್ಲಿ ಹನುಮಂತನ ಜನ್ಮ ದಿನವನ್ನೂ ಆಚರಿಸಲಾಗುತ್ತಿದೆ.

Deepavali 2024

ಅಯೋಧ್ಯೆ ದೀಪೋತ್ಸವ ಎಂದರೇನು?

ಅಯೋಧ್ಯೆಯಲ್ಲಿ ದೀಪಾವಳಿಯ ಸಮಯದಲ್ಲಿ ಆಚರಿಸಲಾಗುವ ಒಂದು ದೊಡ್ಡ ಹಬ್ಬ ಅಯೋಧ್ಯೆ ದೀಪೋತ್ಸವ. ಈ ಹಬ್ಬದ ಪ್ರಮುಖ ಅಂಶವೆಂದರೆ ಸರಯು ನದಿಯ ದಡದಲ್ಲಿ ಲಕ್ಷಾಂತರ ಮಣ್ಣಿನ ದೀಪಗಳನ್ನು ಬೆಳಗಿಸುವುದು. ನಯನ ಮನೋಹರವಾದ ಈ ದೃಶ್ಯ ಜಗತ್ತಿನ ಗಮನ ಸೆಳೆಯಲಿದೆ. ಈ ವರ್ಷ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಸಿದ್ಧತೆ ನಡೆಸಲಾಗುತ್ತಿದೆ.

ಅಯೋಧ್ಯೆ ದೀಪೋತ್ಸವವು 2017ರಲ್ಲಿ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ರಾಮಲೀಲಾ ತಂಡಗಳ ಪ್ರದರ್ಶನ, ಡ್ರೋನ್ ಪ್ರದರ್ಶನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ವರ್ಷದ ದೀಪೋತ್ಸವವು ವಿಶೇಷವಾಗಿದೆ. ಯಾಕೆಂದರೆ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ಅನಂತರ ನಡೆಯುತ್ತಿರುವ ಮೊದಲ ದೀಪಾವಳಿ ಆಚರಣೆ ಇದಾಗಿದೆ. ಈ ಕಾರ್ಯಕ್ರಮವು ಭಗವಾನ್ ರಾಮನ ಸಾಂಕೇತಿಕ ಪಟ್ಟಾಭಿಷೇಕವನ್ನು ಸಹ ಒಳಗೊಂಡಿರುತ್ತದೆ.

Deepavali 2024

ಅಯೋಧ್ಯೆ ದೀಪಾವಳಿಯ ಮಹತ್ವ

ರಾಮ, ಸೀತೆ, ಲಕ್ಷಣರ 14 ವರ್ಷಗಳ ವನವಾಸದ ಬಳಿಕ ಅಯೋಧ್ಯೆಗೆ ಮರಳಿರುವ ಸಂಭ್ರಮದ ಕುರುಹಾಗಿ ಇಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ರಾಕ್ಷಸ ರಾಜ ರಾವಣನ ಅಂತ್ಯದ ಸಂಭ್ರಮವೂ ಇದರಲ್ಲಿ ಸೇರಿದೆ. ಇದು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾಗಿದೆ.

Deepavali 2024: ಹಿಂದೂಗಳಷ್ಟೇ ಅಲ್ಲ; ಬೌದ್ಧ, ಜೈನ, ಸಿಖ್ ಧರ್ಮೀಯರಿಗೂ ದೀಪಾವಳಿ ಪ್ರಮುಖ ಹಬ್ಬ

ಸಾಂಪ್ರದಾಯಿಕವಾಗಿ ಈ ದಿನ ಜನರು ದೀಪಗಳನ್ನು ಬೆಳಗಿಸಿ, ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಆಚರಿಸುತ್ತಾರೆ. ತಮ್ಮತಮ್ಮ ಮನೆಗಳಿಗೆ ತಾಜಾ ಹೂವುಗಳಿಂದ, ಸುಂದರವಾದ ರಂಗೋಲಿಗಳಿಂದ ಅಲಂಕರಿಸುತ್ತಾರೆ. ಈ ಆಚರಣೆಗಳು ಕೇವಲ ಸಂತೋಷ ಮತ್ತು ಸಮೃದ್ಧಿಯ ಸಂಕೇತವಲ್ಲ, ಜೀವನಕ್ಕೆ ಬೆಳಕು ಮತ್ತು ಜಾಗೃತಿಯನ್ನು ತರಲು ಮತ್ತು ಅದರಲ್ಲಿ ನಂಬಿಕೆ ಇಡುವಂತೆ ಮಾಡಲು ನಮ್ಮನ್ನು ಪ್ರೇರೇಪಿಸುವುದಾಗಿದೆ.