Sunday, 24th November 2024

Deepinder Goyal: ಲಿಫ್ಟ್‌ ಬಳಸಲು ಅನುಮತಿ ನಿರಾಕರಿಸಿದ ಮಾಲ್‌; ಕಹಿ ಅನುಭವ ಹಂಚಿಕೊಂಡ ಝೊಮ್ಯಾಟೊ ಸಿಇಒ ದೀಪಿಂದರ್‌ ಗೋಯಲ್‌

Deepinder Goyal

ನವದೆಹಲಿ: ಹರಿಯಾಣದ ಗುರುಗ್ರಾಮದ ಮಾಲ್‌ ಒಂದರಿಂದ ತಾವು ಎದುರಿಸಿದ ಕಹಿ ಅನುಭವವನ್ನು ಝೊಮ್ಯಾಟೊ ಸಿಇಒ (Zomato CEO) ದೀಪಿಂದರ್‌ ಗೋಯಲ್‌ (Deepinder Goyal) ಭಾನುವಾರ ಬಿಚ್ಚಿಟ್ಟಿದ್ದಾರೆ. ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಫುಡ್ ಆರ್ಡರ್ ಸ್ವೀಕರಿಸಲು ತೆರಳಿದಾಗ ಲಿಫ್ಟ್‌ ಬಳಸದಂತೆ ಅಲ್ಲಿನ ಸಿಬ್ಬಂದಿ ತಡೆದಿರುವುದಾಗಿ ತಿಳಿಸಿದ್ದಾರೆ (Viral Video).

ಡೆಲಿವರ್‌ ಬಾಯ್‌ಗಳ ಸವಾಲುಗಳ ಅರಿತುಕೊಳ್ಳಲು ತಮ್ಮ ಪತ್ನಿ ಗ್ರೇಸಿಯಾ ಮುನೋಜ್ ಅವರೊಂದಿಗೆ ಗೋಯಲ್, ಆರ್ಡರ್ ಪಡೆಯಲು ಆಂಬಿಯನ್ಸ್ ಮಾಲ್‌ಗೆ ತೆರಳಿದಾಗ ಅಲ್ಲಿ ಎದುರಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ. ಆರ್ಡರ್‌ ಸ್ವೀಕರಿಸಲು ತೆರಳಿದಾಗ ಅಲ್ಲಿನ ಸಿಬ್ಬಂದಿ ಲಿಫ್ಟ್‌ ಬಳಸಲು ಅನುಮತಿ ನೀಡದೆ ಮೆಟ್ಟಿಲುಗಳತ್ತ ಕೈತೋರಿದರು ಎಂದು ತಿಳಿಸಿದ್ದಾರೆ.

“ಡೆಲಿವರಿ ಪಾರ್ಟ್‌ನರ್‌ಗಳ ಸ್ಥಿತಿಗಳನ್ನು ಸುಧಾರಿಸಲು ನಾವು ಮಾಲ್‌ಗಳೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡಬೇಕಾಗಿದೆ ಎನ್ನುವ ಅಂಶವನ್ನು ನಾನು ಅರಿತುಕೊಂಡೆ. ಮತ್ತು ಮಾಲ್‌ಗಳು ಡೆಲಿವರಿ ಪಾರ್ಟ್‌ನರ್‌ಗಳ ಜತೆಗೆ ಮಾನವೀಯತೆಯಿಂದ ವರ್ತಿಸಬೇಕು” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಝೊಮ್ಯಾಟೊ ಡೆಲಿವರಿ ಏಜೆಂಟ್ ಸಮವಸ್ತ್ರದಲ್ಲಿನ ತಮ್ಮ ಅನುಭವವನ್ನು ವಿವರಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಹಲ್ದಿರಾಮ್ಸ್‌ನಿಂದ ಆರ್ಡರ್‌ ಪಡೆದುಕೊಳ್ಳಲು ನಾವು ಗುರುಗ್ರಾಮದ ಆಂಬಿಯನ್ಸ್ ಮಾಲ್‌ಗೆ ತಲುಪಿದೆವು. ಈ ವೇಳೆ ಸಿಬ್ಬಂದಿ ಲಿಫ್ಟ್‌ ಬಳಸದೆ ಮೆಟ್ಟಿಲು ಮೂಲಕ ತೆರಳುವಂತೆ ತಿಳಿಸಿದರು. ಡೆಲಿವರ್‌ ಬಾಯ್‌ಗಳಿಗಾಗಿ ಪ್ರತ್ಯೇಕ ಲಿಫ್ಟ್‌ ವ್ಯವಸ್ಥೆ ಇದೆಯೇ ಎನ್ನುವುದನ್ನು ಮತ್ತೊಮ್ಮೆ ವಿಚಾರಿಸಿದೆ. ಅವರು ಇಲ್ಲ ಎಂದರು. ಹೀಗಾಗಿ ಮಾಲ್‌ನ 3ನೇ ಮಹಡಿಗೆ ನಡೆದುಕೊಂಡೇ ಹೊರಟಿದ್ದಾಗಿ ತಿಳಿಸಿದ್ದಾರೆ.

ಸದ್ಯ ಗೋಯಲ್‌ ವಾರ ಪೋಸ್ಟ್‌ ವೈರಲ್‌ ಆಗಿದೆ. ಹಲವರು ಈ ಪೋಸ್ಟ್‌ಗೆ ಕಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮಾಲ್‌ ಮಾತ್ರವಲ್ಲ ಕೆಲವೊಂದು ಅಪಾರ್ಟ್‌ಮೆಂಟ್‌ಗಳಲ್ಲಿಯೂ ಡೆಲಿವರಿ ಏಜೆಂಟ್‌ಗಳಿಗೆ ಮುಖ್ಯ ಲಿಫ್ಟ್‌ ಬಳಸಲು ಅನುಮತಿ ನೀಡುವುದಿಲ್ಲ ಎಂದು ಅನೇಕರು ತಿಳಿಸಿದ್ದಾರೆ.

ಕಳೆದ ವಾರ ಗೋಯಲ್‌ ಅವರು ಗುರುಗ್ರಾಮದ ಬೀದಿಗಳಲ್ಲಿ ಆರ್ಡರ್‌ ವಿತರಿಸಲು ಬೈಕ್‌ನಲ್ಲಿ ತೆರಳುವ ವಿಡಿಯೊವನ್ನು ಹಂಚಿಕೊಂಡಿದ್ದರು. ʼʼಗ್ರಾಹಕರಿಗೆ ಆರ್ಡರ್‌ ವಿತರಿಸುವ ಈ ಜವಾಬ್ದಾರಿಯನ್ನು ನಿರ್ವಹಿಸಲು ಖುಷಿಯಾಗುತ್ತದೆ. ಬೈಕ್‌ ರೈಡಿಂಗ್‌ ಕೂಡ ನನ್ನ ನೆಚ್ಚಿನ ಹವ್ಯಾಸʼʼ ಎಂದು ಬರೆದುಕೊಂಡಿದ್ದರು. ಝೊಮ್ಯಾಟೊ ಸಮವಸ್ತ್ರ ಧರಿಸಿ ತಮ್ಮ ಪತ್ನಿಯೊಂದಿಗೆ ಇರುವ ಫೋಟಿವನ್ನು ಹಂಚಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Viral Video: ಕುರ್ಚಿ, ಕೋಲು ಹಿಡಿದುಕೊಂಡು ಆಟೋ ಚಾಲಕನೊಂದಿಗೆ ಹೊಡೆದಾಡಿದ ಪಾನಮತ್ತ ಪೊಲೀಸ್ ಅಧಿಕಾರಿ!