ಮುಂಬೈ: ಮುಂಬೈ ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋದ ಮಾಜಿ ವಲಯ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ಅವರು ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.
ಪರಿಶಿಷ್ಟ ಜಾತಿ ವಿಭಾಗದ ಮೀಸಲಾತಿಯಡಿ ವಾಂಖೆಡೆ ಸರಕಾರಿ ಹುದ್ದೆ ಪಡೆಯಲು ನಕಲಿ ಜಾತಿ ಪ್ರಮಾಣ ಬಳಸಿದ್ದರೆಂದು ಆರೋಪಕ್ಕೆ ಸಂಬಂಧಿಸಿ ಕ್ಲೀನ್ ಚಿಟ್ ದೊರೆತ ಬೆನ್ನಲ್ಲೇ ಪ್ರಕರಣ ದಾಖಲಿಸಲಾಗಿದೆ.
ಎನ್‍ಸಿಪಿ ಪಕ್ಷದ ಮಲಿಕ್ ಅವರು ಅಕ್ಟೋಬರ್‍ನಲ್ಲಿ ವಾಂಖೆಡೆ ವಿರುದ್ಧ ಆರೋಪ ಹೊರಿಸಿದ್ದರು. ವಾಂಖೆಡೆ ಅವರದ್ದೆಂದು ಹೇಳಲಾದ ಜನನ ಪ್ರಮಾಣ ಪತ್ರದ ಪ್ರತಿ ಯೊಂದನ್ನೂ ಮಲಿಕ್ ಟ್ವೀಟ್ ಮಾಡಿದ್ದರಲ್ಲದೆ ಅದರಲ್ಲಿ ಅವರ ಧರ್ಮ ಮುಸ್ಲಿಂ ಎಂದು ನಮೂದಿಸಲಾಗಿತ್ತು.
ಇದರ ಬೆನ್ನಲ್ಲೇ ಭೀಮ್ ಆರ್ಮಿ ಮತ್ತು ಸ್ವಾಭಿಮಾನಿ ರಿಪಬ್ಲಿಕನ್ ಪಕ್ಷ್ ವಾಂಖೆಡೆ ವಿರುದ್ಧ ಮುಂಬೈ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ದೂರಿದ್ದರಲ್ಲದೆ ಅಧಿಕಾರಿಯ ದಾಖಲೆಗಳನ್ನು ಪರಿಶೀಲಿಸುವಂತೆಯೂ ಕೋರಿದ್ದರು.
ವಾಂಖೆಡೆಗೆ ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಪ್ರಕರಣದಲ್ಲಿ ಸಮಿತಿ ಶುಕ್ರವಾರ ಕ್ಲೀನ್ ಚಿಟ್ ನೀಡಿದೆಯಲ್ಲದೆ ಪರಿಶಿಷ್ಟ ಜಾತಿ ವಿಭಾಗದಡಿ ಬರುವ ಮಹರ್ ಜಾತಿಗೆ ಸೇರಿದವರು ಎಂದು ಹೇಳಿತ್ತು. ಅವರು ಮುಸ್ಲಿಮರಾಗಿ ಹುಟ್ಟಿಲ್ಲ ಹಾಗೂ ಹಿಂದು ಧರ್ಮ ತ್ಯಜಿಸಿ ಇಸ್ಲಾಂ ಸೇರಿಲ್ಲ ಎಂದೂ ಸಮಿತಿ ಹೇಳಿದೆ.
ಇದರ ಬೆನ್ನಲ್ಲೇ ವಾಂಖೇಡೆ ಅವರು ಮಲಿಕ್ ವಿರುದ್ಧ ದೂರು ನಿಡಿದ್ದು ಎಫ್‍ಐಆರ್ ಪ್ರಕರಣ ದಾಖಲಿಸಲಾಗಿದೆ. ಗೋರೆಗಾಂವ್ ವಿಭಾಗದ ಎಸಿಪಿಯೊಬ್ಬರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ.