Saturday, 16th November 2024

Dehradun Car Accident: ಡೆಹ್ರಾಡೂನ್‌ ಕಾರು ಅಪಘಾತ; ಸುಳ್ಳು ಸುದ್ದಿ ಹರಡಬೇಡಿ ಎಂದು ಬದುಕುಳಿದವನ ತಂದೆಯಿಂದ ವಿನಂತಿ

Dehradun Car Accident

ಡೆಹ್ರಾಡೂನ್‌: ಇತ್ತೀಚೆಗೆ ಡೆಹ್ರಾಡೂನ್‌ನಲ್ಲಿ ನಡೆದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ಘಟನೆಯಲ್ಲಿ ಬದುಕುಳಿದ ವಿದ್ಯಾರ್ಥಿಯ ತಂದೆ ವಿನಂತಿಸಿಕೊಂಡಿದ್ದಾರೆ. ಡೆಹ್ರಾಡೂನ್‌ನ ಓಎನ್‌ಜಿಸಿ ಕ್ರಾಸಿಂಗ್‌ ಸಮೀಪ ಈ ಭಯಾನಕ ರಸ್ತೆ ಅಪಘಾತ ಸಂಭವಿಸಿತ್ತು (Dehradun Car Accident). ಸರಕು ಸಾಗಾಣಿಕೆಯ ಲಾರಿಯೊಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಒಟ್ಟು 7 ಮಂದಿ ಪೈಕಿ 6 ಜನ ಅಸುನೀಗಿದ್ದು, ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ.

ಅಪಘಾತದ ಬಗ್ಗೆ ಮಾತನಾಡಿರುವ ವಿದ್ಯಾರ್ಥಿಯ ತಂದೆ ವಿಪಿನ್ ಅಗರ್ವಾಲ್, ಅಪಘಾತದಲ್ಲಿ ಸಾವನ್ನಪ್ಪಿದ 6 ಯುವಕರ ಬಗ್ಗೆ ಸಮಾಜ ಸಹಾನುಭೂತಿ ತೋರಿಸಬೇಕೆಂದು ಆಗ್ರಹಿಸಿದರು. ʼʼಅಪಘಾತದ ಬಗ್ಗೆ ಅರ್ಧ ಸತ್ಯವನ್ನು ನಂಬಬೇಡಿ. ನಾವು 6 ಮಕ್ಕಳನ್ನು ಕಳೆದುಕೊಂಡಿದ್ದೇವೆ. ಈ 6 ಮಕ್ಕಳ ಕುಟುಂಬಗಳು ಎಷ್ಟು ಆಳವಾದ ಸಂಕಟದಲ್ಲಿವೆ ಎಂದು ಹೇಳಲಾದಗದು. ಒಬ್ಬ ತುರ್ತು ನಿಗಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟುತ್ತಿದ್ದಾನೆ. ಈ ಸಮಯದಲ್ಲಿ ಅವರು ಮದ್ಯಪಾನ ಮಾಡಿ ಚಲಾಯಿಸುತ್ತಿದ್ದರು, ನಶೆಯಲ್ಲಿದ್ದರು ಎಂದು ವಂದಂತಿಗಳನ್ನು ಹರಡಬೇಡಿ. ತನಿಖೆ ಈಗಾಗಲೇ ನಡೆಯುತ್ತಿದ್ದು, ಸತ್ಯ ಹೊರಬರಲಿದೆ” ಎಂದು ವಿನಂತಿಸಿಕೊಂಡಿದ್ದಾರೆ. ಯಾವುದೇ ವೈದ್ಯಕೀಯ ವರದಿ ಅಥವಾ ಶವಪರೀಕ್ಷೆ ಇನ್ನೂ ಮದ್ಯ ಸೇವನೆಯನ್ನು ದೃಢಪಡಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Dehradun Car Accident: 6 ವಿದ್ಯಾರ್ಥಿಗಳನ್ನು ಬಲಿ ಪಡೆದ ಡೆಡ್ಲಿ ಆಕ್ಸಿಡೆಂಟ್‌ ಮಿಸ್ಟ್ರಿ ರಿವೀಲ್‌; ಪಾರ್ಟಿ ಮಾಡಿ ನಂತ್ರ ಐಷಾರಾಮಿ ಕಾರುಗಳಲ್ಲಿ ರೇಸಿಂಗ್‌!

ಘಟನೆಯೇನು?

ಇತ್ತೀಚೆಗೆ ಡೆಹ್ರಾಡೂನ್‌ನ ಓಎನ್‌ಜಿಸಿ ಕ್ರಾಸಿಂಗ್‌ ಸಮೀಪ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.  ಈ ಭೀಕರ ದುರ್ಘಟನೆಗೆ ಸಂಬಂಧಿಸಿದಂತೆ ಹಲವು ವಂದತಿಗಳು ಸುಳಿದಾಡುತ್ತಿದ್ದು, ಯುವಕರು ಕಾರು ಹತ್ತುವ ಮೊದಲು ಮದ್ಯ ಸೇವಿಸಿದ್ದರು ಎಂದು ಹೇಳಲಾಗಿತ್ತು. ಬಳಿಕ ಐಷಾರಾಮಿ ಕಾರಿನ ಜತೆ ರೇಸಿಂಗ್‌ ಮಾಡಿದ್ದರು ಎನ್ನುವ ಸುದ್ದಿಯೂ ಹರಡಿತ್ತು. ಆ ಸಂಬಂಧ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತಪಟ್ಟವರು ಅದರದಲ್ಲಿ ಇದ್ದರೋ ಇಲ್ಲವೋ ಎಂದು ತನಿಖೆಯ ಮೂಲಕ ಬಹಿರಂಗವಾಗಬೇಕಾಗಿದೆ.