ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಪರಿಸ್ಥಿತಿ ಪ್ರತಿ ದಿನವೂ ವಿಷಮವಾಗುತ್ತಿದೆ. ವಿಷಯುಕ್ತ ಗಾಳಿಯಿಂದಾಗಿ ಜನರು ಸಂಕಟ ಅನುಭವಿಸುತ್ತಿದ್ದಾರೆ. ವಾಯು ಬಿಕ್ಕಟ್ಟಿನಿಂದ ನರಳುತ್ತಿರುವ ರೋಗಿಗಳಿಗೆ ಬೇರೆ ಕಡೆ ವಲಸೆ ಹೋಗುವಂತೆ ಖುದ್ದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇತ್ತ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟ ತಲುಪಿರುವುದರಿಂದ ರೈಲು ಮತ್ತು ವಿಮಾನಗಳ ಸಂಚಾರದಲ್ಲಿ ವಿಳಂಬವಾಗುತ್ತಿದ್ದು, ಬಹುತೇಕ ವಿಮಾನಗಳ ಸಂಚಾರವು ರದ್ದಾಗಿದೆ. 10-15 ದಿನಗಳ ಕಾಲ ಶಾಲಾ-ಕಾಲೇಜುಗಳನ್ನೂ ಮುಚ್ಚಲಾಗಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ (Delhi Air Pollution).
ದಿಲ್ಲಿಯ ಜನರು ಅಕ್ಷರಶಃ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನೈಸರ್ಗಿಕವಾಗಿ ದೊರೆಯುವ ಶುದ್ಧ ಗಾಳಿಯನ್ನೂ ಸೇವಿಸಲಾಗದೆ ಪರದಾಡುತ್ತಿದ್ದಾರೆ. ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಪ್ಪು ಹೊಗೆ ಆವರಿಸಿದೆ. ಜನರು ಆತಂಕದಲ್ಲಿದ್ದು ಹೊರಗಡೆ ಬರಲಿಕ್ಕೂ ಭಯಪಡುತ್ತಿದ್ದಾರೆ.
All of North India has been plunged into a medical emergency as stubble burning continues unchecked across the country. All cities across the country – in UP, Bihar, Rajasthan, Haryana, MP and Delhi – are reeling under severe levels of pollution.
— Atishi (@AtishiAAP) November 18, 2024
And yet despite rising severity… https://t.co/LPVufdKHQI
ವಿಮಾನ ಹಾರಾಟಕ್ಕೆ ಅಡ್ಡಿ
ದಿಲ್ಲಿಯಲ್ಲಿ ಕಳಪೆ ಗುಣಮಟ್ಟದ ವಾಯು ಪರಿಸ್ಥಿತಿ ಮುಂದುವರಿಯುತ್ತಲೇ ಇದೆ. ವಾಯು ಗುಣಮಟ್ಟ ಸೂಚ್ಯಂಕ 484 ದಾಖಲಾಗಿದೆ. ಗೋಚರತೆಯ ಮಟ್ಟ ಕುಸಿದ ಪರಿಣಾಮ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಸ್ಮಾಗ್ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ್ದ ಮಟ್ಟಕ್ಕಿಂತ 60 ಪಟ್ಟು ಕಳಪೆಯಾಗಿದೆ. ಗೋಚರತೆಯ ಮಟ್ಟ ವಿಪರೀತ ಕುಸಿದಿರುವುದರಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ತೊಡಕುಂಟಾಗಿದೆ.
160ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬ
ದಿಲ್ಲಿ ವಿಮಾನ ನಿಲ್ದಾಣದಲ್ಲಿ 160ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಟೇಕಾಫ್ ಆಗುವ 118, ಆಗಮಿಸುವ 43 ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಗೋಚರತೆಯ ಮಟ್ಟ 50 ಮೀಟರ್ ಗಿಂತ ಕಡಿಮೆಯಿದ್ದು ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್ ನಲ್ಲಿ ಭಾರೀ ಸಮಸ್ಯೆಯಾಗುತ್ತಿದೆ. ಸೋಮವಾರ ಬೆಳಗ್ಗೆ 7 ವಿಮಾನಗಳ ಸಂಚಾರ ರದ್ದಾಗಿದ್ದಷ್ಟೇ ಅಲ್ಲದೇ ದಿಲ್ಲಿ ಮತ್ತು ಆನಂದ್ ವಿಹಾರ್ ರೈಲುಗಳ ಸಂಚಾರದಲ್ಲೂ ವಿಳಂಬವಾಗಿದೆ. 2ರಿಂದ 9 ಗಂಟೆಯವರೆಗೂ ರೈಲು ಸಂಚಾರದಲ್ಲಿ ವಿಳಂಬವಾಗುತ್ತಿದೆ.
ಸೇವಿಸುವ ವಾಯು ಈಗ ವಿಷವಾಯು!
ದಿಲ್ಲಿಯ ವಾಯು ಗುಣಮಟ್ಟ ಕುಸಿಯುತ್ತಿದೆ. ಆಪ್ ಸರ್ಕಾರ ಹಲವಾರು ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ನಾಲ್ಕನೇ ಹಂತದ ರೆಸ್ಪಾನ್ಸ್ ಆಕ್ಷ್ಯನ್ ಪ್ಲ್ಯಾನ್ ಅನ್ನು ಜಾರಿ ಮಾಡಿದೆ. ರಾಜಧಾನಿಯ ಹತ್ತು ಹಲವು ಪ್ರದೇಶಗಳಲ್ಲಿ ವಾಯುವಿನ ಗುಣಮಟ್ಟ 485ಕ್ಕೆ ಕುಸಿದಿದೆ. ಸ್ಮಾಗ್ ಗೋಚರತೆಯ ಮಟ್ಟದ ತೀವ್ರ ಕುಸಿತದಿಂದ ಜನರಿಗೆ ತೊಂದರೆ ಉಂಟಾಗಿದೆ. ಕಳಪೆ ಗುಣಮಟ್ಟದ ವಾಯು ಸೇವನಯಿಂದ ಜನರ ಆಯುಷ್ಯ ಕಡಿಮೆಯಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಜನರು ಆತಂಕಕ್ಕೀಡಾಗಿದ್ದಾರೆ. ವಿಷಕಾರಿ ಗಾಳಿ ಸೇವನೆಯಿಂದ ಆಯುಷ್ಯದಲ್ಲಿ 7-8 ವರ್ಷಗಳು ಕಡಿಮೆಯಾಗಲಿದೆ ಎಂದು ವೈದ್ಯರು ಅಂದಾಜು ಮಾಡಿದ್ದಾರೆ. ಉಸಿರಾಟದ ಸಮಸ್ಯೆ ಇರುವ ಜನರಿಗೆ ಒಳ್ಳೆಯ ಗುಣಮಟ್ಟದ ಗಾಳಿ ಇರುವ ಪ್ರದೇಶಗಳಿಗೆ ಹೋಗಿ ವಾಸಿಸುವಂತೆ ಸಲಹೆ ನೀಡುತ್ತಿದ್ದಾರೆ. ರೋಗಿಗಳು ಉತ್ತರಖಾಂಡ್, ಹಿಮಾಚಲ ಪ್ರದೇಶ ಮತ್ತು ಗೋವಾದ ಕಡೆಗೆ ಹೋಗುತ್ತಿದ್ದಾರೆ.
ಮಕ್ಕಳಿಗೆ ಆನ್ಲೈನ್ನಲ್ಲೇ ಪಾಠ
ಎನ್ಸಿಆರ್ನಲ್ಲಿ ಮಾಲಿನ್ಯವು ತೀವ್ರಮಟ್ಟ ತಲುಪಿರುವುದರಿಂದ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ 4ರ ನಿಬಂಧನೆಗಳು ಜಾರಿಗೆ ಬಂದಿವೆ. ಇನ್ನಷ್ಟು ಕಠಿಣ ನಿಯಮಗಳು ಜಾರಿಗೆ ಬಂದಿದ್ದು ದಿಲ್ಲಿ ಎನ್ಸಿಆರ್ ಪ್ರದೇಶಕ್ಕೆ ಟ್ರಕ್ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 6ರಿಂದ 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ನಡೆಯಲಿವೆ. ಕನಿಷ್ಠ 10-15 ದಿನಗಳ ಕಾಲ ಶಾಲೆಗಳು ಮುಚ್ಚಲಿವೆ. ಮುಂದಿನ ಸೂಚನೆ ಬರುವವರೆಗೂ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಅತಿಶಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್ ಸೋಮವಾರ ಗ್ರಾಪ್ನ 4 ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ದಿಲ್ಲಿ ಮತ್ತು ಎನ್ಸಿಆರ್ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಅವುಗಳನ್ನು ಜಾರಿಗೊಳಿಸಲು ಇಷ್ಟು ವಿಳಂಬವೇಕೆ ಎಂದು ಕೋರ್ಟ್ ಇದೀಗ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಯೋಜನೆ ಅಡಿಯಲ್ಲಿ ಅಗತ್ಯವಿರುವ ಕ್ರಮಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ತಂಡಗಳನ್ನು ತಕ್ಷಣವೇ ರಚಿಸುವಂತೆ ದಿಲ್ಲಿ-ಎನ್ಸಿಆರ್ ರಾಜ್ಯಗಳಿಗೆ ಕಟ್ಟುನಿಟ್ಟಾದ ಸೂಚನೆಯನ್ನು ನೀಡಿದೆ.
ಗಾಳಿಯಲ್ಲಿರುವ ವಿಷದ ಅಂಶಗಳ ಲೆಕ್ಕಾಚಾರದಿಂದ ದಿಲ್ಲಿಯಲ್ಲಿ ವಾಸಿಸುವ ಜನರು ದಿನಕ್ಕೆ 40 ಸಿಗರೇಟ್ಗಳಿಗೆ ಸಮಾನವಾದ ಹೊಗೆಯನ್ನು ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಪರಿಸ್ಥಿತಿ ಮತ್ತಷ್ಟು ಉಲ್ಭಣ ಆಗುವ ಮೊದಲು ರಾಷ್ಟ್ರ ರಾಜಧಾನಿಯ ಜನರು ಎಚ್ಚೆತ್ತುಕೊಳ್ಳಬೇಕು.
ಈ ಸುದ್ದಿಯನ್ನೂ ಓದಿ: Maharashtra Election: ವೋಟಿಗಾಗಿ ನೋಟು! ಕಂತೆ ಕಂತೆ ಹಣ ಹಂಚಿಕೆ; ಬಿಜೆಪಿ ಮಾಜಿ ಸಚಿವರ ವಿಡಿಯೊ ವೈರಲ್