Friday, 22nd November 2024

Delhi Airport: ಹಾಂಕಾಂಗ್‌ನಿಂದ ಬಂದ ಮಹಿಳೆಯ ಬ್ಯಾಗ್‌ನಲ್ಲಿತ್ತು 26 ಐಫೋನ್‌ಗಳು!

Delhi Airport

ನವದೆಹಲಿ: ಹಾಂಕಾಂಗ್‌ನಿಂದ (Hong Kong) ಭಾರತಕ್ಕೆ ಬಂದ ಮಹಿಳೆಯ ಬ್ಯಾಗ್‌ನಲ್ಲಿದ್ದ 26 ಐಫೋನ್ 16 ಪ್ರೊ ಮ್ಯಾಕ್ಸ್ ( iPhone 16 Pro Max ) ಅನ್ನು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಕಸ್ಟಮ್ಸ್ ಅಧಿಕಾರಿಗಳು (customs officers) ವಶ ಪಡಿಸಿಕೊಂಡಿದ್ದಾರೆ.

ಹಾಂಕಾಂಗ್‌ನಿಂದ ಬಂದ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದಾಗ ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿ 26 ಐಫೋನ್ 16 ಪ್ರೊ ಮ್ಯಾಕ್ಸ್ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಯಾರಿಗೂ ಗೊತ್ತಾಗದಂತೆ ಸ್ಮಾರ್ಟ್‌ಫೋನ್‌ಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಇಡಲಾಗಿತ್ತು.

ಭಾರತದಲ್ಲಿ ಇದರ ಬೆಲೆ 256ಜಿಬಿ 1,44,900 ರೂ., 512ಜಿಬಿ ಬೆಲೆ 1,64,999 ರೂ. ಮತ್ತು 1ಟಿಬಿ ಬೆಲೆ 1,84,900 ರೂ. ಇದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರ ಸಾಮಗ್ರಿಗಳನ್ನು ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಇಷ್ಟೊಂದು ಸ್ಮಾರ್ಟ್ ಫೋನ್‌ಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿರುವುದು ಯಾಕೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚಲು ಸಂಪೂರ್ಣ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Road Accident: ಕಾರ್ಕಳ ಬಳಿ ಭೀಕರ ಅಪಘಾತ; ತಂದೆ, ಮೂವರು ಮಕ್ಕಳ ದುರ್ಮರಣ

ಇತ್ತೀಚಿನ ಐಫೋನ್ ಮಾದರಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಅಕ್ರಮ ಆಮದು ಪ್ರಯತ್ನಗಳನ್ನು ತಡೆಯಲು ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ. ಈ ನಡುವೆ ಈ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.