Friday, 22nd November 2024

Delhi Blast: CRPF ಶಾಲೆ ಬಳಿ ಭಾರೀ ಸ್ಫೋಟ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ; ಬೈಕ್‌ ಸವಾರ ಜಸ್ಟ್‌ ಮಿಸ್‌!

Delhi Blast

ನವದೆಹಲಿ: ಕೇಂದ್ರೀಯ ಮೀಸಲು ಪಡೆ(CRPF) ಶಾಲೆಯ ಬಳಿ ಭಾರೀ ಸ್ಫೋಟವೊಂದು ಸಂಭವಿಸಿದ್ದು, ಇದೀಗ ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಸಿಆರ್‌ಪಿಎಫ್ ಶಾಲೆಯ ಹೊರಗೆ ಸ್ಫೋಟ(Delhi Blast) ಸಂಭವಿಸಿದ್ದು, ಏಕಾಏಕಿ ಶಾಲೆಯ ತಡೆಗೋಡೆ ಬ್ಲಾಸ್ಟ್‌ ಆಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಇನ್ನುಸುಮಾರು ಎರಡು ಕಿ.ಮೀ ದೂರದವರೆಗೆ ಸ್ಫೋಟದ ಸದ್ದು ಕೇಳಿಸಿದೆ.

ದೇಶಾದ್ಯಂತ ಹಲವು ಏರ್‌ಲೈನ್ಸ್‌ಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ಸ್ಥಳದಲ್ಲಿ ಬಾಂಬ್‌ ನಿಷ್ಕ್ರೀಯ ದಳ, ಪೊಲೀಸ್‌ ವಿಧಿ ವಿಜ್ಞಾನ ತಂಡ ತನಿಖೆ ನಡೆಸುತ್ತಿದೆ. ಘಟನಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿರುವ ಪೊಲೀಸರು ಸ್ಫೋಟದ ಮೂಲವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ.‌

ಸ್ಥಳಕ್ಕೆ ದೌಡಾಯಿಸಿದ NIA ತಂಡ

ಇನ್ನು ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಶಾಲೆಯ ಗೋಡೆ, ಸಮೀಪದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಅಕ್ಕಪಕ್ಕದಲ್ಲಿ ಯಾರು ಇದ್ದರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮೊಬೈಲ್ ನೆಟ್‌ವರ್ಕ್ ಡೇಟಾವನ್ನು ಸಂಗ್ರಹಿಸಿದ್ದಾರೆ, ಇದು ಕಚ್ಚಾ ಬಾಂಬ್ ಎಂದು ಶಂಕಿಸಲಾಗಿದೆ.

ಶಾಲೆಯ ಹೊರಗಿನ ಪ್ರದೇಶವನ್ನು ಪರೀಕ್ಷಿಸಿದ ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಅನುಮಾನಾಸ್ಪದ “ಬಿಳಿ ಪುಡಿ” ಕಂಡು ಬಂದಿದ್ದು, ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಶಾಲೆಯ ಗೋಡೆಯ ಬಳಿ ನೆಲ ಅಗೆದು ಮಣ್ಣಿನ ಮಾದರಿ ಪಡೆದಿದ್ದಾರೆ. ಇದು ಒಂದು ರೀತಿಯ ಸ್ಫೋಟಕವೇ ಅಥವಾ ಬೇರೆ ವಸ್ತುಗಳೆ ಎಂಬುದನ್ನು ನಾವು ಅದನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಖಚಿತಪಡಿಸಿಕೊಳ್ಳಬಹುದು. ನಾವು ಕಚ್ಚಾ ಬಾಂಬ್ ಎಂದು ಶಂಕಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್‌ಎಸ್‌ಜಿ ಕಮಾಂಡೋಗಳು ಇಡೀ ಪ್ರದೇಶವನ್ನು ಸ್ಕ್ಯಾನ್ ಮಾಡಲು ರೋಬೋಟ್‌ಗಳನ್ನು ನಿಯೋಜಿಸಿದ್ದು, ಎನ್‌ಐಎ ಮತ್ತು ದೆಹಲಿ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Blast: ಸಿಆರ್‌ಇಎಫ್‌ ಶಾಲೆ ಬಳಿ ಭಾರೀ ‍ಸ್ಫೋಟ